Friday, June 2, 2023

Latest Posts

ಸಾರ್ವಜನಿಕ ಸಾರಿಗೆ- ಬೆಂಗಳೂರು ಮತ್ತು ಮೈಸೂರು ಈ ವಿಚಾರದಲ್ಲಿ ಬೆಸ್ಟ್ ಎಂದಿದೆ ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾರ್ವಜನಿಕ ಸಾರಿಗೆಯ ಬಳಕೆಯಲ್ಲಿ ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ನಗರಗಳು ವಿಶ್ವಾಸಾರ್ಹತೆ ಮತ್ತು ಇವುಗಳ ಮೇಲಿನ ಜನರ ಅವಲಂಬನೆ ದೃಷ್ಟಿಯಿಂದ ಅಗ್ರಶ್ರೇಣಿಯಲ್ಲಿವೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.

ಒಎಂಐ ಫೌಂಡೇಷನ್‌ ವತಿಯಿಂದ 2022ರ ದೇಶದ ‘ಸುಲಲಿತ ಸಾರಿಗೆ ಸೂಚ್ಯಂಕ’ ವರದಿಯನ್ನು ವಸತಿ ಮತ್ತು ನಗರ ವ್ಯವಹಾರ ಹಾಗು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್‌ ಸಿಂಗ್‌ ಪುರಿ ಇತ್ತೀಚೆಗೆ ಬಿಡುಗಡೆಗೊಳಿಸಿದ್ದಾರೆ. ಸುಮಾರು 50, 488 ಜನರ ಪ್ರತಿಕ್ರಿಯೆ ಹಾಗು ಸರ್ಕಾರ ಮತ್ತು ಇತರ ಮೂಲಗಳ ದತ್ತಾಂಶಗಳಿಂದ ತಯಾರಿಸಲ್ಪಟ್ಟ ವರದಿ ಇದಾಗಿದ್ದು ಭಾರತದ ಅತಿದೊಡ್ಡ ಸಮೀಕ್ಷೆ ಎಂದೆನಿಸಿದೆ. ನಗರಗಳ ಬೇರೆ ಬೇರೆ ಸ್ಥಳಗಳಿಂದ ಸಂಗ್ರಹಿತ ಮಾದರಿಯನ್ನು ಆಧರಿಸಿ ವರದಿ ತಯಾರಿಸಲ್ಪಟ್ಟಿದೆ.

ಈ ವರದಿಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಹಾಗು ಸಾಂಸ್ಕೃತಿಕ ನಗರಿ ಮೈಸೂರು ನಗರಗಳು ಸ್ಥಾನ ಪಡೆದಿದ್ದು ಸುಲಭ ಸಾರಿಗೆಯ ಕೆಲ ನಿರ್ದಿಷ್ಟ ಆಯಾಮಗಳಲ್ಲಿ ಗಣನೀಯ ಪ್ರಗತಿ ಸಾಧಿಸಿವೆ. ಸಾರ್ವಜನಿಕ ಸಾರಿಗೆ ವಿಶ್ವಾಸಾರ್ಹತೆಯ ವಿಷಯದಲ್ಲಿ ರಾಜಧಾನಿ ಬೆಂಗಳೂರು ಬೆಂಗಳೂರು ಅಭಿವೃದ್ಧಿ ಸಾಧಿಸಿದ್ದು 2018 ಕ್ಕಿಂತ 2022ರಲ್ಲಿ ವಿಶ್ವಾಸಾರ್ಹತೆಯ ಪ್ರಮಾಣ ಹೆಚ್ಚಿದೆ . 2018ರಲ್ಲಿ 30 ಶೇಕಡಾದಷ್ಟಿದ್ದ ವಿಶ್ವಾಸಾರ್ಹತೆಯ ಪ್ರಮಾಣ 2022ರಲ್ಲಿ 39 ಶೇಕಡಾಗೆ ಏರಿಕೆಯಾಗಿದೆ. ಇದಲ್ಲದೇ ಸಾರಿಗೆ ಸೌಕರ್ಯದ ಕುರಿತಾಗಿಯೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಸುಖಕರ ಪ್ರಯಾಣ ಸೌಲಭ್ಯಗಳ ವಿಷಯದಲ್ಲಿ ಪ್ರತಿಕ್ರಿಯೆಗಳು 2018ರಲ್ಲಿ 28 ಶೇಕಡಾಗಿಂತ 2022ರಲ್ಲಿ 40ಶೇಕಡಾಗೆ ಏರಿಕೆಯಾಗಿರುವುದಾಗಿ ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಮೂಲಸೌಕರ್ಯಗಳ ಕುರಿತು ಹೆಚ್ಚಿನ ಕಾಳಜಿ ವ್ಯಕ್ತವಾಗಿದ್ದು ಪ್ರತಿಕ್ರಿಯೆಗಳು 2018ರಲ್ಲಿನ 51ಶೇಕಡಾಗಿಂತ 2022ರಲ್ಲಿ 78ಶೇಕಡಾಗೆ ಏರಿಕೆಯಾಗಿವೆ.

ಇನ್ನು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮಾಹಿತಿ ಪಡೆಯುವ ವಿಷಯದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಅತ್ಯಧಿಕ ಅಂಕ ಗಳಿಸಿದ್ದು ಎಲ್ಲಾ ಸಮಯದಲ್ಲೂ ಸಾರ್ವಜನಿಕ ಸಾರಿಗೆಯ ಸುಲಭ ಲಭ್ಯತೆಯ ವಿಷಯದಲ್ಲಿಯೂ ಹೆಚ್ಚಿನ ಅಂಕಗಳನ್ನು ಗಳಿಸಿದೆ. ಸಾರ್ವಜನಿಕ ಸಾರಿಗೆಯ ಸುರಕ್ಷತೆಯ ವಿಷಯದಲ್ಲಿಯೂ ಮೈಸೂರು ಹೆಚ್ಚಿನ ಅಂಕ ಪಡೆದಿದೆ. ಆದರೆ, 2018 ಕ್ಕೆ ಹೋಲಿಸಿದರೆ ಕೈಗೆಟುಕುವಿಕೆ, ವಿಶ್ವಾಸಾರ್ಹತೆ, ಸೌಕರ್ಯ, ಶುಚಿತ್ವಗಳ ವಿಷಯದಲ್ಲಿ ಸುಧಾರಣೆ ಕಂಡುಬಂದಿದ್ದರೂ ಸಹ, ಸಾರ್ವಜನಿಕ ಸಾರಿಗೆಯ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!