ಮಾಜಿ ಯೋಧನ ಆತ್ಮಹತ್ಯೆ ಪ್ರಕರಣದ ಆರೋಪಿ ವಿದೇಶಕ್ಕೆ ಪರಾರಿ: ಕೊಡಗು ಎಸ್.ಪಿ. ರಾಮರಾಜನ್

ಹೊಸದಿಗಂತ ವರದಿ,ಮಡಿಕೇರಿ:

ನಗರದ ಮಾಜಿ ಯೋಧ ಸಂದೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬ ವಿದೇಶಕ್ಕೆ ಪರಾರಿಯಾಗಿರುವ ಶಂಕೆಯಿದ್ದು, ಆತ ಸ್ವದೇಶಕ್ಕೆ ಮರಳಿದಾಕ್ಷಣ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ಉಕ್ಕುಡ ನಿವಾಸಿ, ಮಾಜಿ ಯೋಧ ಸಂದೇಶ್ ಎಂಬವರು ಇತ್ತೀಚೆಗೆ ಇಲ್ಲಿನ ಪಂಪ್’ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಡೆತ್’ನೋಟ್’ನಲ್ಲಿ ಹೆಸರಿಸಿರುವ ಬಹುತೇಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಉಳಿದಂತೆ ಆರೋಪಿ, ರೆಸಾರ್ಟ್ ಮಾಲಕ ಸತ್ಯ ಹಾಗೂ ಪೊಲೀಸ್ ಸತೀಶ್ ಎಂಬವರನ್ನು ಬಂಧಿಸಬೇಕಾಗಿದೆ. ಇವರ ಬಂಧನಕ್ಕೆ ಈಗಾಗಲೇ ವಿಶೇಷ ತಂಡ ರಚಿಸಲಾಗಿದ್ದು ಇವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ವಿವರಿಸಿದರು.
ಆರೋಪಿ ಸತ್ಯ ಎಂಬಾತ ವಿದೇಶಕ್ಕೆ ತೆರಳಿರುವ ಮಾಹಿತಿಯಿದ್ದು, ಅವರು ಭಾರತಕ್ಕೆ ಬಂದ ತಕ್ಷಣ ಅವರನ್ನು ಬಂಧಿಸಲಾಗುವುದು. ಪೊಲೀಸ್ ಸತೀಶ ಎಂದು ಡೆತ್ ನೋಟ್’ನಲ್ಲಿ ನಮೂದಿಸಲಾಗಿದ್ದು, ಇಲಾಖೆಯಲ್ಲಿ ಸತೀಶ ಎಂಬವರು ಹಲವಾರು ಮಂದಿ ಇದ್ದು, ನಿರ್ದಿಷ್ಟವಾಗಿ ಯಾವ ಸತೀಶ ಎಂಬುದನ್ನು ಸಂದೇಶ್ ಅವರ ಕುಟುಂಬ ವರ್ಗದ ಸದಸ್ಯರು ಅಥವಾ ಇದರ ಬಗ್ಗೆ ತಿಳಿದಿರುವ ಸಾರ್ವಜನಿಕರು ಮಾಹಿತಿ ನೀಡಿದರೆ ಅವರ ಹೆಸರನ್ನು ಗೌಪ್ಯವಾಗಿಟ್ಟು ಆರೋಪಿಯನ್ನು ಬಂಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಾಲಬಾಧೆ‌ ಕಾರಣ: ಕಗ್ಗೋಡ್ಲುವಿನ ರೆಸಾರ್ಟ್’ನಲ್ಲಿ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಕೇರಳದ ದಂಪತಿಯ ಶವ ಪರೀಕ್ಷೆ ನಡೆಸಲಾಗಿದ್ದು, ಅವರ ಸಂಬಂಧಿಗಳು ಕೇರಳದಿಂದ ಆಗಮಿಸಿದ್ದಾರೆ. ಮೃತದೇಹವನ್ನು ಅವರಿಗೆ ಹಸ್ತಾಂತರಿಸಲಾಗುತ್ತಿದ್ದು, ಡೆತ್ ನೋಟ್’ನಲ್ಲಿರುವಂತೆ ಅವರಿಗೆ ಹಣಕಾಸಿನ ತೊಂದರೆ ಇರುವುದರಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಕೇರಳದ ಪತ್ತಾಂತಿಟ್ಟು ಠಾಣೆಯಲ್ಲಿ ಸಾಲದ ವಿಚಾರವಾಗಿ ಮೊಕದ್ದಮೆ ದಾಖಲಾಗಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಇನ್ನಷ್ಟೇ ಮಾಹಿತಿ ಕಲೆ ಹಾಕಿ ಘಟನೆಗೆ ಕಾರಣ ತಿಳಿಯಬೇಕಾಗಿದೆ ಎಂದು ರಾಮರಾಜ್ ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!