ದಿಗಂತ ವರದಿ, ಚಿತ್ರದುರ್ಗ:
ಹೆಂಡತಿಯನ್ನು ಕೊಲೆ ಮಾಡಿ ಮನೆಯಲ್ಲಿ ಹೂತು ಹಾಕಿದ್ದ ಆರೋಪಿಯನ್ನು ಘಟನೆ ನಡೆದ 48 ಗಂಟೆಗಳಲ್ಲಿ ಬಂಧಿಸುವಲ್ಲಿ ಭರಮಸಾಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಣನೂರಿನ ನಿವಾಸಿ ನಾರಪ್ಪ ಬಂಧಿತ ಆರೋಪಿ.
ಆರೋಪಿ ನಾರಪ್ಪ ಕೋಣನೂರು ಗ್ರಾಮದಲ್ಲಿ ತನ್ನ ಹೆಂಡತಿ ಹಾಗೂ ಮಗನೊಂದಿಗೆ ಜೀವನ ನಡೆಸುತ್ತಿದ್ದ. ಆರೋಪಿ ನಾರಪ್ಪ ಚಿತ್ರದುರ್ಗ ನಗರದ ಪ್ರಾವಿಜನ್ ಸ್ಟೋರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಂದ ಹಣವನ್ನು ತನ್ನ ಹೆಂಡತಿಗೆ ಕೊಡದೆ ಓಸಿ, ಇಸ್ಪೀಟ್ ಜೂಜಾಟ ಹಾಗೂ ಕುಡಿತಕ್ಕೆ ವೆಚ್ಚ ಮಾಡುತ್ತಿದ್ದ. ಇದರಿಂದ ಗಂಡ ಹೆಂಡತಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಅದರಂತೆ ಡಿ.೨೫ ರಂದು ರಾತ್ರಿ ಸಹ ಜಗಳ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಆರೋಪಿ ನಾರಪ್ಪ ಡಿ.೨೬ ರಂದು ಬೆಳಗಿನಜಾವ ಒನಕೆಯಿಂದ ತನ್ನ ಹೆಂಡತಿ ಸುಮಾ ತಲೆಗೆ ಒಡೆದು ಕೊಲೆ ಮಾಡಿದ್ದ. ನಂತರ ಮೃತ ದೇಹವನ್ನು ಮನೆಯಲ್ಲಿನ ಕಡಪ ಕಲ್ಲುಗಳನ್ನು ತೆಗೆದು ಮನೆಯ ಒಳಗೆ ಹೂತು ಹಾಕಿದ್ದ.
ಡಿ.೨೯ ರಂದು ಭರಮಸಾಗರ ಠಾಣೆಗೆ ಬಂದು ತನ್ನ ಹೆಂಡತಿ ಕಾಣೆಯಾಗಿರುವುದಾಗಿ ದೂರು ನೀಡಿದ್ದ. ಅನುಮಾನಗೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಪೊಲೀಸರ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಶ್ಲಾಘಿಸಿದ್ದಾರೆ.