ಹೊಸದಿಗಂತ ವರದಿ ಹುಬ್ಬಳ್ಳಿ:
ಹುಬ್ಬಳ್ಳಿಯ ಲಿಂಗಾರಾಜ ನಗರದ ಗೋಲ್ಡನ್ ಹೈಟ್ಸ್ ಅಪಾರ್ಟ್ಮೆಂಟ್‌ನಲ್ಲಿ ಹಳೇ ವೈಷಮ್ಯದ ಹಿನ್ನೆಲೆ ಮೂವರು ಒಬ್ಬ ವ್ಯಕ್ತಿಯನ್ನು ಮರ್ಡರ್ ಮಾಡಿದ್ದಾರೆ.
ತದನಂತರ ತಪ್ಪಿಸಿಕೊಂಡು ಓಡುತ್ತಿದ್ದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದು ನಂತರ ಬಂಧಿಸಿದ್ದಾರೆ. ಮೃತರನ್ನು 24 ವರ್ಷದ ಆಕಾಶ್ ವಾಲ್ಮೀಕಿ ಎಂದು ಗುರುತಿಸಲಾಗಿದೆ.
ಆನಂದನಗರದ ಯಲ್ಲಪ್ಪ, ವಿನೋದ, ಅಭಿಷೇಕ ಬಂಧಿತ ಆರೋಪಿಗಳು. ಸೋಮವಾರ ರಾತ್ರಿ ಆಕಾಶ ವಾಲ್ಮೀಕಿಯನ್ನು ಮೂವರು ಸೇರಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿ ಮೃತ ದೇಹವನ್ನು ಕೆಎಂಸಿಆರ್ ಐಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದರು.
ನಗರದ ಎಂಟಿಎಸ್ ಕಾಲೋನಿಯಲ್ಲಿ ಮೂವರು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ವಿದ್ಯಾನಗರ ಪಿಎಸ್ ಐ ಶ್ರೀಮಂತ ಪಾಟೀಲ, ಕಮರಿಪೇಟ ಪಿಎಸ್ ಐ ಸುನೀಲ ಎಂ. ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ನಡೆದ ಘಟನಾ ಸ್ಥಳಕ್ಕೆ ಹಾಗೂ ನಗರದ ಕೆಎಂಸಿಆರ್ ಐ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭೇಟಿ ನೀಡಿ ಪರಿಶೀಲಿಸಿ, ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ.
ಎರಡು ಗುಂಪುಗಳ ಮಧ್ಯೆ ಇದ್ದ ಹಳೇ ವೈಷಮ್ಯ ಆಕಾಶ ಕೊಲೆಯಲ್ಲಿ ಅಂತ್ಯವಾಗಿದೆ. ಪೂರ್ವ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಮೃತ ಆಕಾಶ ಮೇಲೆ ಒಂದು ಪ್ರಕರಣ ದಾಖಲಿದೆ. ಕೊಲೆ ಮಾಡಿ ಎಂಟಿಎಸ್ ಕಾಲೋನಿಯಲ್ಲಿ ಸೇರಿದ್ದ ಆರೋಪಿಗಳನ್ನು ಬಂಧಿಸಲು ಸಿಬ್ಬಂದಿ ಹೋದಾಗ ಅವರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಮೂವರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಆಯುಕ್ತ ಎನ್. ಶಶಿಕುಮಾರ್ ಮಾಧ್ಯಮದವರಿಗೆ ತಿಳಿಸಿದರು.
ವಿದ್ಯಾನಗರ ಪಿಎಸ್ ಐ ಶ್ರೀಮಂತ ಪಾಟೀಲ, ಕಮರಿಪೇಟ ಪಿಎಸ್ ಐ ಸುನೀಲ ಎಂ., ಶರಣಗೌಡ ಮುಲಿಮನಿ, ಮುತ್ತಪ್ಪ ಲಮಾಣಿ ಗಾಯಗೊಂಡ ಪೊಲೀಸ್ ಕೆಎಂಸಿಆರ್ ಐ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.