ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯರ ಸಾಧನೆಗಳು ಎಲ್ಲೆಡೆ ಚರ್ಚೆಯಾಗುತ್ತಿದ್ದು, ಇದು ದೇಶದ ಸಂಸತ್ತಿನ 75 ವರ್ಷಗಳ ಇತಿಹಾಸದಲ್ಲಿ ಒಗ್ಗಟ್ಟಿನ ಪ್ರಯತ್ನದ ಫಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಲೋಕಸಭೆಯಲ್ಲಿ ‘ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪಯಣ – ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆ’ ಕುರಿತು ಚರ್ಚೆಯನ್ನು ಆರಂಭಿಸಿದ ಪ್ರಧಾನಿ, ಚಂದ್ರಯಾನ-3ರ ಯಶಸ್ಸು ಭಾರತ ಮಾತ್ರವಲ್ಲದೆ ವಿಶ್ವವೇ ಹೆಮ್ಮೆ ಪಡುವಂತೆ ಮಾಡಿದೆ ಎಂದರು.
“ವಿಜ್ಞಾನ-ತಂತ್ರಜ್ಞಾನ ಜೊತೆಗೆ ನಮ್ಮ ವಿಜ್ಞಾನಿಗಳ ಸಾಮರ್ಥ್ಯ ಮತ್ತು ದೇಶದ 140 ಕೋಟಿ ಜನರ ಸಂಪರ್ಕ ಹೊಂದಿದ ಭಾರತದ ಶಕ್ತಿಯ ಹೊಸ ರೂಪವನ್ನು ಎತ್ತಿ ತೋರಿಸಿದೆ” ಎಂದರು.
ಸೆಪ್ಟೆಂಬರ್ 22 ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಎರಡನೇ ದಿನ ಮಂಗಳವಾರದಿಂದ ಸಂಸತ್ತು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಬಗ್ಗೆಯೂ ಪ್ರಧಾನಿ ಉಲ್ಲೇಖಿಸಿದರು.
ʻನಾವೆಲ್ಲರೂ ಈ ಐತಿಹಾಸಿಕ ಕಟ್ಟಡಕ್ಕೆ ವಿದಾಯ ಹೇಳುತ್ತಿದ್ದೇವೆ. ಸ್ವಾತಂತ್ರ್ಯದ ಮೊದಲು, ಈ ಸದನವು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ಗೆ ಸ್ಥಳವಾಗಿತ್ತು. ಸ್ವಾತಂತ್ರ್ಯದ ನಂತರ, ಇದು ಸಂಸತ್ ಭವನದ ಗುರುತನ್ನು ಗಳಿಸಿತುʼ ಎಂದರು. ಈ ಕಟ್ಟಡವನ್ನು ನಿರ್ಮಿಸಿದ್ದು ವಿದೇಶಿಗರೇ ಇರಬಹುದು. ಆದರೆ, ಈ ಭವನ ಕಟ್ಟಲು ಈ ದೇಶದ ಜನರು ಬೆವರ ಹನಿಯೂ ಇದೆ. ನಿರ್ಮಾಣಕ್ಕೆ ಹೋದ ಶ್ರಮ, ಮತ್ತು ಹಣ ನನ್ನ ದೇಶವಾಸಿಗಳದ್ದು ಎಂದು ಹೆಮ್ಮೆಯಿಂದ ಹೇಳುತ್ತಿದ್ದೇನೆ. ಹಳೆಯ ಸಂಸತ್ ಭವನ ನಮಗೆ ಯಾವಾಗಲು ಪ್ರೇರಣೆ ಎಂದರು.
ಈ ತಿಂಗಳ ಆರಂಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಜಿ20 ಶೃಂಗಸಭೆಯ ಯಶಸ್ಸಿನ ಬಗ್ಗೆಯೂ ಪ್ರಧಾನಿ ಮಾತನಾಡಿ,
“ಇಂದು, ಎಲ್ಲಾ ಭಾರತೀಯರ ಸಾಧನೆಗಳು ಎಲ್ಲೆಡೆ ಚರ್ಚೆಯಾಗುತ್ತಿವೆ. ಇದು ನಮ್ಮ ಸಂಸತ್ತಿನ 75 ವರ್ಷಗಳ ಇತಿಹಾಸದಲ್ಲಿ ನಮ್ಮ ಒಗ್ಗಟ್ಟಿನ ಪ್ರಯತ್ನದ ಫಲಿತಾಂಶವಾಗಿದೆ ಎಂದರು. ಚಂದ್ರಯಾನ-3 ರ ಯಶಸ್ಸು ಭಾರತವನ್ನು ಮಾತ್ರವಲ್ಲದೆ ಜಗತ್ತನ್ನು ಹೆಮ್ಮೆಪಡುವಂತೆ ಮಾಡಿದೆ. ಸಂಸತ್ ಭವನದಲ್ಲಿ ಇಂದು ಮತ್ತೊಮ್ಮೆ ಪ್ರಧಾನಿ ಮೋದಿ ನಮ್ಮ ವಿಜ್ಞಾನಿಗಳನ್ನು ಅಭಿನಂದಿಸಿದರು.