ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಪ್ರತಿಭಾವಂತ ನಟಿ ವಿದ್ಯಾ ಬಾಲನ್ ಸದ್ಯ ತಮ್ಮ ಹೊಸ ಚಿತ್ರದ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದ್ದಾರೆ. ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ಮೂಲಕ ಅವರು ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಚಿತ್ರದಲ್ಲಿ ವಿದ್ಯಾ ಬಾಲನ್ ‘ಕಾಂತಾ’ ಎನ್ನುವ ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ‘ಜೈಲರ್ 2 ಸೂಪರ್ ಶೋ’ ಕಾರ್ಯಕ್ರಮದಲ್ಲಿ ಚಿತ್ರತಂಡ ಭಾಗವಹಿಸಿ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್, ನಟಿ ರಮ್ಯಾ ಕೃಷ್ಣನ್, ಎಸ್ಜೆ ಸೂರ್ಯ ಹಾಗೂ ಸೂರಜ್ ವೆಂಜರಮೂಡು ಉಪಸ್ಥಿತರಿದ್ದರು. ಈ ವೇಳೆ ಎಸ್ಜೆ ಸೂರ್ಯ ಅವರು, ವಿದ್ಯಾ ಬಾಲನ್ ಅವರಿಗೆ ತಮಿಳು ಭಾಷೆಯ ಉದ್ದನೆಯ ಸಂಭಾಷಣೆಗಳನ್ನು ಮಾತನಾಡಲು ಆರಂಭದಲ್ಲಿ ಸ್ವಲ್ಪ ಕಷ್ಟವಾಯಿತು ಎಂದು ತಮಾಷೆಯಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾ ಬಾಲನ್, ತಮ್ಮ ದೃಶ್ಯ ಮುಗಿಯುವವರೆಗೆ ಯಾರೂ ಮಾತಿಗೆ ಸಿಗುತ್ತಿರಲಿಲ್ಲ, ಶಾಟ್ ಮುಗಿದ ಬಳಿಕವಷ್ಟೇ ಎಲ್ಲರೊಂದಿಗೆ ಹಾಯಾಗಿ ಮಾತನಾಡುತ್ತಿದ್ದೆ ಎಂದು ನೆನಪುಗಳನ್ನು ಮೆಲುಕುಹಾಕಿದರು.
ವಿಶೇಷವಾಗಿ ಚಿತ್ರೀಕರಣದ ವೇಳೆ ನಡೆದ ಒಂದು ಮರೆಯಲಾರದ ಘಟನೆಯನ್ನು ವಿದ್ಯಾ ಬಿಚ್ಚಿಟ್ಟಿದ್ದಾರೆ. ಶೂಟಿಂಗ್ಗೆ ಕೆಲವೇ ನಿಮಿಷಗಳ ಮೊದಲು ನಿರ್ದೇಶಕ ನೆಲ್ಸನ್ ಒಂದೂವರೆ ಪುಟದ ಹೊಸ ಸಂಭಾಷಣೆಯನ್ನು ಕೈಗಿಟ್ಟಿದ್ದರಂತೆ. ಅದರೊಂದಿಗೆ ಸಿಗರೇಟ್ ಸೇದುವ ದೃಶ್ಯವನ್ನೂ ಮಾಡುವಂತೆ ತಿಳಿಸಿದಾಗ ವಿದ್ಯಾಗೆ ದೊಡ್ಡ ಆಘಾತವೇ ಕಾದಿತ್ತು. ಈ ಬಗ್ಗೆ ಮಾತನಾಡಿದ ಅವರು, “ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು, ಇಷ್ಟು ದೊಡ್ಡ ಡೈಲಾಗ್ ಅನ್ನು ಒಟ್ಟಿಗೆ ಹೇಗೆ ಹೇಳುವುದು ಎಂದು ನನಗೆ ತುಂಬಾ ಭಯವಾಗಿತ್ತು” ಎಂದಿದ್ದಾರೆ.
ನಿರ್ದೇಶಕ ನೆಲ್ಸನ್ ಮಾತನಾಡಿ, “ಮಾನಿಟರ್ನಲ್ಲಿ ನೋಡುವಾಗ ಅವರ ಕೈಗಳು ಮತ್ತು ಧ್ವನಿ ನಡುಗುತ್ತಿತ್ತು. ಕೊನೆಗೆ ಸಿಗರೇಟ್ ಹೊಗೆ ಅವರ ಕಣ್ಣಿಗೇ ಬಿತ್ತು. ಆಗ ವಿದ್ಯಾ ಬಂದು, ‘ನಾನೇನೂ ಮಾಡುತ್ತಿಲ್ಲ, ಸಿಗರೇಟೇ ತಾನಾಗೇ ನಡುಗುತ್ತಿದೆ’ ಎಂದು ಮುಗ್ಧವಾಗಿ ಹೇಳಿದರು” ಎಂದು ತಮಾಷೆಯಾಗಿ ವಿವರಿಸಿದರು. ಇಷ್ಟೆಲ್ಲಾ ಅನುಭವಿ ನಟಿಯಾಗಿದ್ದರೂ, ರಜನಿಕಾಂತ್ ಅವರಂತಹ ದಿಗ್ಗಜನ ಎದುರು ನಟಿಸುತ್ತಿರುವುದು ಮತ್ತು ಸಿಗರೇಟ್ ದೃಶ್ಯದ ನರ್ವಸ್ನೆಸ್ನಿಂದ ತಮ್ಮ ಇಡೀ ದೇಹವೇ ನಡುಗಿತ್ತು ಎಂದು ವಿದ್ಯಾ ಬಾಲನ್ ಬಹಿರಂಗಪಡಿಸಿದರು.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಮೊದಲ ಗ್ಲಿಂಪ್ಸ್ ನಲ್ಲಿ ನೀಲಿ ಬಣ್ಣದ ಸೀರೆ ಧರಿಸಿ, ಕೈಯಲ್ಲಿ ಸಿಗರೇಟ್ ಹಿಡಿದು ಮೆಟ್ಟಿಲುಗಳಿಳಿದು ಬರುವ ಅವರ ಗತ್ತು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ರಜಿನಿಕಾಂತ್ ಮತ್ತು ವಿದ್ಯಾ ಬಾಲನ್ ಜೋಡಿಯ ಈ ಚಿತ್ರದ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ.



