ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲ ನಟನಾಗಿ ನಟಿಸಿ, ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದ ನಿತಿನ್ ಗೋಪಿ (Nithin Gopi) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ .
ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ‘ಹಲೋ ಡ್ಯಾಡಿ’ (Hello Daddy) ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಇವರು ಬಾಲನಟರಾಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ‘ಶಾಲೆಗೆ ಈ ದಿನ ರಜಾ’ ಹಾಡಿನ ಮೂಲಕ ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿ ನೆಲೆಯೂರಿದ್ದರು.
ನಿತಿನ್ ಗೋಪಿ ಬೆಂಗಳೂರಿನ ಇಟ್ಟುಮಡುವಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು. ಬೆಳಗ್ಗೆ ನಾಲ್ಕು ಗಂಟೆಗೆ ಅವರಿಗೆ ಹೃದಯಾಘಾತವಾಗಿತ್ತು (Heart Attack). ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿತ್ತು . ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇವಲ 39ರ ವಯಸ್ಸಿನ ನಿತಿನ್, ಹೊಸ ಧಾರಾವಾಹಿಯನ್ನು ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
ಚಿರಬಾಂಧವ್ಯ, ನಿಶಬ್ಧ, ಕೆರಳಿದ ಕೇಸರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಿತಿನ್ ಬಾಲಕಲಾವಿದರಾಗಿ ನಟಿಸಿದ್ದರು. ಶ್ರುತಿ ನಾಯ್ಡು (Shruti Naidu) ಪ್ರೊಡಕ್ಷನ್ ನಲ್ಲಿ ಹಾಗೂ ಬಾಲಾಜಿ ಟೆಲಿಫಿಲಮ್ಸ್ ಅಡಿಯಲ್ಲಿ ಮೂಡಿ ಬಂದ ಧಾರಾವಾಹಿಗಳಿಗೆ ನಿರ್ದೇಶಕರಾಗಿಯೂ ಇವರು ಕೆಲಸ ಮಾಡಿದ್ದರು. ಕನ್ನಡದಲ್ಲಿ ಮಾತ್ರವಲ್ಲ ತಮಿಳು ಧಾರಾವಾಹಿಯನ್ನೂ ಅವರು ನಿರ್ದೇಶನ ಮಾಡಿದ್ದಾರೆ.
ನಿತಿನ್ ಅಗಲಿಕೆಗೆ ಕಿರುತೆರೆಯ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಕಂಬನಿ ಮಿಡಿಸಿದ್ದಾರೆ.