ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಎವರ್‌ಗ್ರೀನ್ ಎಂಟರ್‌ಟೈನರ್ ಗೋವಿಂದ ಅವರು ಸರಿಸುಮಾರು ಏಳು ವರ್ಷಗಳ ಸುದೀರ್ಘ ಗ್ಯಾಪ್ ಬಳಿಕ ಚಿತ್ರರಂಗಕ್ಕೆ ಮರುಪ್ರವೇಶ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ‘ರೂಪಾ’ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಈ ಸಿನಿಮಾದಲ್ಲಿ ಗೋವಿಂದ ಅವರಿಗೆ ಜೋಡಿಯಾಗಿ ಹೊಸ ಪ್ರತಿಭೆ ರಾಣಿ ಸ್ವರ್ಣಕಾರ್ ಕಾಣಿಸಿಕೊಳ್ಳುತ್ತಿದ್ದಾರೆ.
ನಟನೆ ಜೊತೆಗೆ ನಿರ್ಮಾಣದ ಜವಾಬ್ದಾರಿ
ವಿಶೇಷವೆಂದರೆ, ಈ ಚಿತ್ರಕ್ಕೆ ಗೋವಿಂದ ಅವರೇ ಬಂಡವಾಳ ಹೂಡಿ ಬಿಗ್ ಸ್ಕ್ರೀನ್‌ಗೆ ತರುತ್ತಿದ್ದಾರೆ. ತಮ್ಮ ಸೆಕೆಂಡ್ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ಅವರು, “ಗೋವಿಂದ ಜರ್ನಿ ಮುಗಿಯಿತು, ಇನ್ಮುಂದೆ ಅವರು ನಟಿಸಲ್ಲ ಅಂದುಕೊಂಡವರಿಗೆ ಈ ಸಿನಿಮಾ ಉತ್ತರ. ನಾನು ಪ್ರತಿ ಬಾರಿಯೂ ಫೀನಿಕ್ಸ್‌ನಂತೆ ಎದ್ದು ಬರುತ್ತೇನೆ” ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ಕಥೆ
“‘ರೂಪಾ’ ಸಿನಿಮಾ ಚಿತ್ರಮಂದಿರಗಳಲ್ಲಿ ಹೊಸ ಮ್ಯಾಜಿಕ್ ಸೃಷ್ಟಿಸಲಿದೆ. ಮುಖ್ಯವಾಗಿ ಇದು ಇಂದಿನ ಯುವ ಪೀಳಿಗೆಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ದೊಡ್ಡ ಮಟ್ಟದ ಸ್ಫೂರ್ತಿ ನೀಡಲಿದೆ” ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
90ರ ದಶಕದಲ್ಲಿ ಅದ್ಭುತ ಡ್ಯಾನ್ಸ್ ಹಾಗೂ ಕಾಮಿಡಿ ಟೈಮಿಂಗ್ ಮೂಲಕ ಬಾಲಿವುಡ್ ಆಳಿದ್ದ ಗೋವಿಂದ, ಕೊನೆಯದಾಗಿ 2019ರ ‘ರಂಗೀಲಾ ರಾಜ’ ಚಿತ್ರದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಇದೀಗ ‘ರೂಪಾ’ ಮೂಲಕ ಭರ್ಜರಿ ಗೆಲುವು ಸಾಧಿಸುವ ಇರಾದೆಯಲ್ಲಿದ್ದಾರೆ ಹಿರಿಯ ನಟ.



