ಹೊಸದಿಗಂತ ವರದಿ,ಕುಶಾಲನಗರ:
ತಮಿಳು ನಟ ವಿಜಯ್ ರಂಜಾನ್ ತಿಂಗಳಿನಲ್ಲಿ ಶುಕ್ರವಾರ ಚೆನ್ನೈನಲ್ಲಿ ಇಫ್ತಾರ್ ಪಾರ್ಟಿ ಆಯೋಜನೆ ಮಾಡಿದ್ದರು. ರಾಜಕಾರಣಿಯಾಗಿ ಬದಲಾಗಿರುವ ನಟ, ಇಫ್ತಾರ್ ಪಾರ್ಟಿಯಲ್ಲಿ ಮುಸ್ಲಿಂ ಟೋಪಿ ಧರಿಸಿ, ಸಂಜೆಯ ನಮಾಜ್‌ನಲ್ಲಿ ಭಾಗಿಯಾದರು.
ವಿಜಯ್ ಅವರ ಫೋಟೋಗಳು ಮತ್ತು ವೀಡಿಯೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ಮತ್ತು ಮುಖ್ಯಸ್ಥರು ತಮ್ಮ ಮುಸ್ಲಿಂ ಸಹೋದರರೊಂದಿಗೆ ಇಫ್ತಾರ್ ಆಚರಣೆಗಳಲ್ಲಿ ಭಾಗವಹಿಸುವಾಗ ಸಂಪೂರ್ಣ ಬಿಳಿ ಬಣ್ಣದ ಉಡುಪನ್ನು, ಸ್ಕಲ್ ಕ್ಯಾಪ್‌ಅನ್ನು ಧರಿಸಿರುವುದು ಕಂಡುಬಂದಿದೆ.
ವಿಜಯ್ ಇಡೀ ದಿನ ಉಪವಾಸ ಮಾಡಿ ಇಸ್ಲಾಮಿಕ್ ಪದ್ಧತಿಗಳ ಪ್ರಕಾರ ಪ್ರಾರ್ಥನೆ ಸಲ್ಲಿಸಿದರು, ನಂತರ ಇಫ್ತಾರ್ ಆಚರಣೆಗಳಲ್ಲಿ ಭಾಗವಹಿಸಿ ಸಾವಿರಾರು ಸ್ಥಳೀಯರಿಗೆ ಔತಣಕೂಟ ಏರ್ಪಡಿಸಿದರು. ಚೆನ್ನೈನ ರಾಯಪೆಟ್ಟಾದಲ್ಲಿರುವ ವೈಎಂಸಿಎ ಮೈದಾನದಲ್ಲಿ ಅವರ ಪಕ್ಷವು ಇಫ್ತಾರ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸ್ಥಳೀಯ 15 ಮಸೀದಿಗಳ ಇಮಾಮ್‌ಗಳನ್ನು ಭಾಗವಹಿಸಲು ಆಹ್ವಾನಿಸಲಾಗಿತ್ತು ಮತ್ತು ಸುಮಾರು 3,000 ಜನರಿಗೆ ಅವಕಾಶ ಕಲ್ಪಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.
ವಿಜಯ್ ಪ್ರಸ್ತುತ 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ ಮತ್ತು ವರದಿಗಳ ಪ್ರಕಾರ, ಅವರು AIADMK ಜೊತೆ ಯಾವುದೇ ರೀತಿಯ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.