ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ತಂಡದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾ ಗುತ್ತಿದ್ದಂತೆಯೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆದ್ರೆ ಇದೀಗ ನಿವೃತ್ತಿ ವಿಚಾರದಲ್ಲಿ ಯೂ ಟರ್ನ್ ಹೊಡೆದಿದ್ದು, ಮೂರನೇ ಆವೃತ್ತಿಯ SA20 ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಮುಂದಾಗಿದ್ದಾರೆ.
39 ವರ್ಷದ ದಿನೇಶ್ ಕಾರ್ತಿಕ್, ಕಳೆದ ಜೂನ್ ತಿಂಗಳಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಮುಂಬರುವ ಜನವರಿ 09ರಿಂದ ಆರಂಭವಾಗಲಿರುವ ಮೂರನೇ ಆವೃತ್ತಿಯ SA20 ಲೀಗ್ ಟೂರ್ನಿಯಲ್ಲಿ ಪಾರ್ಲ್ ರಾಯಲ್ಸ್ ತಂಡದ ಪರ ಕಣಕ್ಕಿಳಿಯಲು ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಭಾರತ ಪರ ಮೂರು ಮಾದರಿಯ ಕ್ರಿಕೆಟ್‌ನಿಂದ 180ಕ್ಕೂ ಅಧಿಕ ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್, ‘ನಾನು ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿದಾಗ ಹಾಗೂ ಇಲ್ಲಿ ಆಡಿದ ಸಾಕಷ್ಟು ಒಳ್ಳೆಯ ನೆನಪುಗಳು ನನ್ನ ಜತೆಗಿವೆ. ಈಗ ಇಲ್ಲಿ ಆಡಲು ಮತ್ತೊಂದು ಅವಕಾಶವಿದೆ ಎಂದಾಗ ನನಗೆ ಇಲ್ಲ ಎನ್ನಲು ಮನಸ್ಸೇ ಬರಲಿಲ್ಲ. ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿ ರಾಯಲ್ಸ್ ಪರ ಗೆಲುವು ಸಾಧಿಸುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 14 ಪಂದ್ಯಗಳನ್ನಾಡಿ 187.36ರ ಸ್ಟ್ರೈಕ್‌ರೇಟ್‌ನಲ್ಲಿ 326 ರನ್ ಸಿಡಿಸಿದ್ದರು. ಇನ್ನು ದಿನೇಶ್ ಕಾರ್ತಿಕ್ 2022ರಲ್ಲಿ ಟೀಂ ಇಂಡಿಯಾ ಪರ ಕಟ್ಟ ಕಡೆಯ ಟಿ20 ಪಂದ್ಯವನ್ನಾಡಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಎದುರು ದಿನೇಶ್ ಕಾರ್ತಿಕ್ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.