August 10, 2026
Monday, August 10, 2026
spot_img

ನನ್ನನ್ನು ಎಷ್ಟು ಕೆಳಕ್ಕೆ ತಳ್ಳುತ್ತೀರೋ ತಳ್ಳಿ, ಮತ್ತೆ ಎದ್ದು ಬರ್ತೀನಿ ಎಂದ ನಟಿ ಕೃಷಿ ತಾಪಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಯಾಂಡಲ್‌ವುಡ್‌ ನಟಿ ಕೃಷಿ ತಾಪಂಡ ವೈಯಕ್ತಿಕ ಜೀವನ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಲೇ ಇದೆ. ಕೃಷಿ ಮಾಜಿ ಪ್ರಿಯಕರನ ವಿಚಾರವಾಗಿ ಚರ್ಚೆಗೆ ಬಂದಿದ್ದರು ಅದಾದ ನಂತರ ಸ್ನೇಹಿತ ವೈಶಾಖ್‌ ಸಾವಿನ ಸುದ್ದಿ ಚರ್ಚೆ ಆಗುತ್ತಿತ್ತು. ಸ್ನೇಹಿತನನ್ನು ಕಳೆದುಕೊಂಡು ಬೇಸರದಲ್ಲಿ ನಟಿಗೆ ಸೋಶಿಯಲ್‌ ಮೀಡಿಯಾ ಕಮೆಂಟ್ಸ್‌ಗಳಿಂದ ಇನ್ನಷ್ಟು ನೋವುಂಟಾಗಿದ್ದು, ಸುದೀರ್ಘವಾದ ಪೋಸ್ಟ್‌ ಒಂದನ್ನು ಮಾಡಿದ್ದಾರೆ.

ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮತ್ತೆ ಮತ್ತೆ ಮೂಡುತ್ತಿದೆ. ಯಾರದ್ದೋ ನೋವನ್ನು ನೋಡಿ ಅದನ್ನೇ ಮನರಂಜನೆ ಮಾಡಿಕೊಳ್ಳುವಷ್ಟು ನಾವು ಯಾವಾಗ ಬದಲಾಗಿಬಿಟ್ಟೆವು? ಯಾರಾದರೂ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅವರನ್ನು ಹಾಗೆಯೇ ಬಿಡುವುದು ಏಕೆ ಇಷ್ಟು ಕಷ್ಟ? ನನ್ನ ವೈಯಕ್ತಿಕ ಜೀವನದ ಬಗ್ಗೆ ಪ್ರತಿಯೊಬ್ಬರಿಗೂ ಉತ್ತರ ನೀಡಬೇಕಾದ ಅಗತ್ಯ ಎಲ್ಲಿದೆ? ಮೌನವಾಗಿದ್ದರೆ ಅದು ದೌರ್ಬಲ್ಯವಲ್ಲ. ಒಳ್ಳೆಯತನ ಎಂಬುದು ವೀಕ್‌ನೆಸ್‌ ಅಲ್ಲ. ನಾನು ಮೌನವನ್ನು ಆಯ್ಕೆ ಮಾಡಿಕೊಂಡದ್ದು ಗೌರವಕ್ಕಾಗಿ, ಒಳ್ಳೆಯತನವನ್ನು ಆಯ್ಕೆ ಮಾಡಿಕೊಂಡದ್ದು ನನ್ನ ವ್ಯಕ್ತಿತ್ವಕ್ಕಾಗಿ ಎಂದಿದ್ದಾರೆ.

ನನ್ನನ್ನು ಎಷ್ಟೇ ಕೆಳಗೆ ತಳ್ಳಿದರೂ, ಎಷ್ಟೇ ಪ್ರಶ್ನಿಸಿದರೂ, ಎಷ್ಟೇ ಜಡ್ಜ್ ಮಾಡಿದರೂ, ಎಷ್ಟೇ ಕಥೆಗಳನ್ನು ಕಟ್ಟಿದರೂ ನಾನು ಪ್ರತಿ ಬಾರಿಯೂ ಮತ್ತೆ ಎದ್ದು ನಿಂತಿದ್ದೇನೆ, ಇನ್ಮುಂದೆಯೂ ಎದ್ದು ನಿಲ್ಲುತ್ತೇನೆ. ನನ್ನನ್ನು ಇನ್ನೂ ತಳ್ಳಬೇಕು ಎನಿಸಿದರೆ ತಳ್ಳಿ. ನೆಲದೊಳಗೆ ಇನ್ನೂ ಆಳಕ್ಕೆ ಹೂಳಬೇಕು ಎನಿಸಿದರೆ ಹೂಳಿ. ಬೇರುಗಳು ಎಷ್ಟು ಆಳವಾಗುತ್ತವೆಯೋ, ಮರ ಅಷ್ಟು ಗಟ್ಟಿಯಾಗಿ ಬೆಳೆಯುತ್ತದೆ. ನಾನು ಈಗ ನಿಂತಿರುವುದು ದ್ವೇಷದ ಮೇಲಲ್ಲ, ನನ್ನ ಅಪ್ಪ-ಅಮ್ಮನ ಪ್ರೀತಿಯ ಮೇಲೆ, ನನ್ನ ಕುಟುಂಬದ ಆಶೀರ್ವಾದ, ಸ್ನೇಹಿತರ ಬೆಂಬಲ ಹಾಗೂ ನನ್ನನ್ನು ನಿಜವಾಗಿ ಅರಿತಿರುವ ಜನರ ವಿಶ್ವಾಸದ ಮೇಲೆ. ಪ್ರೀತಿ, ಕರುಣೆ ಮತ್ತು ಸಹಾನುಭೂತಿಯಿಂದ ಕಟ್ಟಿಕೊಂಡ ನನ್ನ ಬಳಗವೇ ನನ್ನ ಶಕ್ತಿ. ನಾನು ಯಾರಿಗಾದರೂ ಉತ್ತರ ನೀಡಬೇಕಿದ್ದರೆ ಅದು ಇವರಿಗೆ ಮಾತ್ರ, ಬೇರೆ ಯಾರಿಗೂ ಅಲ್ಲ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !