ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಶ್ರೀದೇವಿ ಹುಟ್ಟಿದ ದಿನ ಇಂದು (ಆಗಸ್ಟ್ 13)ಅವರ ಪುತ್ರಿ, ನಟಿ ಜಾಹ್ನವಿ ಕಪೂರ್ ಪ್ರತಿವರ್ಷದಂತೆ ಈ ಬಾರಿಯೂ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಸಾಂಪ್ರದಾಯಿಕ ಹಳದಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಅವರು ತಮ್ಮ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಜತೆಗೆ ದೇಗುಲಕ್ಕೆ ಅಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾಯಿಯನ್ನು ನೆನಪಿಸಿಕೊಂಡು ಪೋಸ್ಟ್ ಶೇರ್ ಮಾಡಿದ ಜಾಹ್ನವಿ ಕಪೂರ್, ಶ್ರೀದೇವಿಯೊಂದಿಗಿನ ತಮ್ಮ ಬಾಲ್ಯದ ಫೋಟೊ ಹಂಚಿಕೊಂಡು ‘ಹುಟ್ಟುಹಬ್ಬದ ಶುಭಾಶಯಗಳು ಅಮ್ಮ. ಐ ಲವ್ ಯೂʼ ಎಂದು ಬರೆದುಕೊಂಡಿದ್ದಾರೆ.
ತಿರುಪತಿ ದೇವಸ್ಥಾನದ ಜತೆ ಶ್ರೀದೇವಿ ಅವರ ಕುಟುಂಬಕ್ಕೆ ವಿಶೇಷ ನಂಟಿದೆ. ಶ್ರೀದೇವಿ ಆಗಾಗ ಕುಟುಂಬ ಸಮೇತ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಈಗ ಜಾಹ್ನವಿ ಕಪೂರ್ ಕೂಡ ನಿಯಮಿತವಾಗಿ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ. ಜಾಹ್ನವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಅವರು ದೇವಸ್ಥಾನಕ್ಕೆ ಆಗಮಿಸಿ ದೇವರ ದರುಶನ ಪಡೆದುಕೊಳ್ಳುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟಿ ಶ್ರೀದೇವಿ ಮೃತಪಟ್ಟು 6 ವರ್ಷ ಕಳೆದಿದೆ. 2018ರ ಫೆಬ್ರವರಿ 24ರಂದು ಅವರು ತಮ್ಮ 54ನೇ ವಯಸ್ಸಿನಲ್ಲಿ ದುಬೈಯಲ್ಲಿ ನಿಧನ ಹೊಂದಿದ್ದರು.