ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ ಸಂಸ್ಥಾಪಕ ಬಾಬಾ ರಾಮ್‍ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪವನ್ನು ಸುಪ್ರೀಂ ಕೋರ್ಟ್ ಕೈಬಿಟ್ಟಿದೆ.
ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠವು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ, ತೀರ್ಪು ಪ್ರಕಟಿಸಿದೆ.
ಕಂಪನಿ ಮತ್ತು ಅದರ ಸಂಸ್ಥಾಪಕ ನ್ಯಾಯಾಲಯದ ಆದೇಶದ ಉಲ್ಲಂಘನೆ ಹಿನ್ನಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಬಳಿಕ ರಾಮ್‍ದೇವ್ ಅವರು ನವೆಂಬರ್ 2023ರ ಸುದ್ದಿಗೋಷ್ಠಿಯಲ್ಲಿ ಕ್ಷಮೆಯಾಚಿಸಿದ್ದರು.
ಕೋವಿಡ್-19 ವ್ಯಾಕ್ಸಿನೇಷನ್ ಮತ್ತು ಆಧುನಿಕ ಔಷಧದ ವಿರುದ್ಧ ಪತಂಜಲಿ ಟೀಕೆ ಮಾಡಿತ್ತು. ಪತಂಜಲಿ ಉತ್ಪನ್ನಗಳು ಕೊರೊನಾ ಗುಣಪಡಿಸುತ್ತದೆ ಎಂದು ಜಾಹೀರಾತು ನೀಡಿತ್ತು. ಈ ಜಾಹೀರಾತಿನ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ಪ್ರಾರಂಭಿಸಿತ್ತು.
ಈ ವರ್ಷ ಫೆಬ್ರವರಿಯಲ್ಲಿ, ನ್ಯಾಯಾಲಯವು ಅಂತಹ ಜಾಹೀರಾತುಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ವಿಧಿಸಿತ್ತು. ತಪ್ಪುದಾರಿಗೆಳೆಯುವ ಜಾಹಿರಾತಿನ ಸಲುವಾಗಿ ಕಂಪನಿ ಮತ್ತು ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತ್ತು. ನವೆಂಬರ್ 2023 ರಲ್ಲಿ, ಪತಂಜಲಿ ಆಯುರ್ವೇದ ಉತ್ಪನ್ನಗಳ ಪ್ರತಿ ಜಾಹೀರಾತಿನಲ್ಲಿ ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳುವ ಪ್ರತಿ ಜಾಹಿರಾತಿಗೆ 1 ಕೋಟಿ ರೂ. ದಂಡ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು. ಭವಿಷ್ಯದಲ್ಲಿ ಸುಳ್ಳು ಜಾಹೀರಾತುಗಳನ್ನು ಪ್ರಕಟಿಸದಂತೆ ಪತಂಜಲಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.