ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಕಂಪನಿಗಳಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರ ಪಾಲಿದೆ ಎಂದು ಸ್ಫೋಟಕ ವರದಿ ಬಹಿರಂಗಗೊಂಡಿರುವ ಬೆನ್ನಲ್ಲೇ ಅದಾನಿ ಗ್ರೂಪ್ ಅಮೆರಿಕದ ಶಾರ್ಟ್‌ಸೆಲ್ಲರ್ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ವರದಿಯನ್ನು ತಳ್ಳಿ ಹಾಕಿದೆ.
ಈ ಕುರಿತು 106 ಪುಟಗಳ ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿಯ ಬೇನಾಮಿ ಕಂಪೆನಿಗಳಲ್ಲಿ ತಾವೇ ಷೇರುಗಳನ್ನು ಹೊಂದಿರುವ ಕಾರಣಕ್ಕೆ ಸೆಬಿ ಮುಖ್ಯಸ್ಥೆಯಾಗಿರುವ ಮಾಧವಿ ಬುಚ್, ಅದಾನಿ ಗ್ರೂಪ್ ವಿರುದ್ಧದ ಷೇರು ಅವ್ಯವಹಾರ ಕುರಿತು ಸರಿಯಾಗಿ ತನಿಖೆ ಮಾಡಿಲ್ಲ ಎಂದು ಆಪಾದಿಸಿದೆ. ಮಾಧವಿ ಬುಚ್ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್ನಲ್ಲಿರುವ ನಕಲಿ ಕಂಪೆನಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಈ ವರದಿ ಬೆನ್ನಲ್ಲೇ ಅದಾನಿ ಗ್ರೂಪ್ ಪ್ರಕಟಣೆ ಹೊರಡಿಸಿದ್ದು, ಸಾಗರೋತ್ತರದ ವ್ಯವಹಾರಗಳು ಸಂಪೂರ್ಣವಾಗಿ ಪಾರದರ್ಶಕವಾಗಿದೆ. ಅದಾನಿ ಗ್ರೂಪ್ ವಿರುದ್ಧದ ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ, ಇವುಗಳನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗಿದೆ, ಆಧಾರರಹಿತವೆಂದು ಸಾಬೀತುಪಡಿಸಲಾಗಿದೆ ಮತ್ತು ಜನವರಿ 2024 ರಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಈಗಾಗಲೇ ವಜಾಗೊಳಿಸಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
2023ರ ಹಿಂಡನ್‌ಬರ್ಗ್ ವರದಿಯಲ್ಲಿ ಏನಿತ್ತು?
ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. ಹೂಡಿಕೆದಾರರಿಗೆ ಅದಾನಿ ಗ್ರೂಪ್ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಅದಾನಿ ಗ್ರೂಪ್ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು.
ಹಿಂಡನ್‌ಬರ್ಗ್ ವರದಿ ಕುರಿತು ತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹಲವರು ಮೊರೆ ಹೋಗಿದ್ದರು. ಅಲ್ಲದೆ ಅದಾನಿ ಗ್ರೂಪ್ ಅಕ್ರಮ ಪತ್ತೆಹಚ್ಚುವಲ್ಲಿ ಸೆಬಿ ವಿಫಲವಾಗಿದೆ. ಹಾಗಾಗಿ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ಸರ್ವೋಚ್ಚ ನ್ಯಾಯಾಲಯವು 2023ರ ಮಾರ್ಚ್‌ನಲ್ಲಿ ಸೆಬಿ ತನಿಖೆ ಮೇಲೆ ನಿಗಾ ಇರಿಸಲು, ತನಿಖೆಯಲ್ಲಿ ದೋಷ ಪತ್ತೆಹಚ್ಚಲು ಆರು ಸದಸ್ಯರ ತನಿಖಾ ಸಮಿತಿ ರಚಿಸಿತ್ತು. ಇದಾದ ಎರಡು ತಿಂಗಳ ಬಳಿಕ ಸೆಬಿಯು ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿತ್ತು. ;ಅದಾನಿ ಗ್ರೂಪ್ ವಂಚನೆ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಈ ಹಂತದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ; ಎಂದು ಉಲ್ಲೇಖಿಸಿತ್ತು.
ಗೌತಮ್ ಅದಾನಿ-ಹಿಂಡನ್‌ಬರ್ಗ್ ವರದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ನಡೆಸುತ್ತಿರುವ ತನಿಖೆಯ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು. ‘ಸೆಬಿಯು ತನಿಖೆ ಹಾಗೂ ನಿಯಂತ್ರಕ ಸಂಸ್ಥೆಯಾಗಿರುವುದರಿಂದ ಅದರ ತನಿಖೆಯಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಲು ಆಗುವುದಿಲ್ಲ’ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.