Sunday, March 26, 2023

Latest Posts

ಮಾರುಕಟ್ಟೆ ನಷ್ಟದಲ್ಲಿದ್ದರೂ ಏರಿಕೆಯಾಗುತ್ತಿವೆ ಅದಾನಿ ಷೇರುಗಳು- ಕಾರಣವೇನು ? ಇಲ್ಲಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬುಧವಾರದ ವಹಿವಾಟಿನಲ್ಲಿ ಷೇರುಮಾರುಕಟ್ಟೆಯು ನೀರಸ ಪ್ರದರ್ಶನ ತೋರುತ್ತಿದ್ದು ಆರಂಭಿಕ ವಹಿವಾಟಿನಲ್ಲೇ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್‌ 300 ಅಂಕಗಳಿಗೂ ಹೆಚ್ಚು ಕುಸಿದಿದ್ದರೆ ನಿಫ್ಟಿಯು 90 ಅಂಕಗಳಿಗಿಂತ ಹೆಚ್ಚು ಕುಸಿದು ಕೆಂಬಣ್ಣದಲ್ಲಿ ಮುಳುಗಿವೆ. ಮಾರುಕಟ್ಟೆ ಪರಿಸ್ಥಿತಿಗಳು ಪ್ರತಿಕೂಲವಾಗಿದ್ದರೂ ಅದಾನಿ ಷೇರುಗಳು ಮಾತ್ರ ಹಸಿರುಬಣ್ಣದಲ್ಲೇ ಮುಂದುವರೆದಿವೆ.

ಹೆಚ್ಚಿನ ಅದಾನಿ ಸಮೂಹದ ಷೇರುಗಳು ಲಾಭವನ್ನು ವಿಸ್ತರಿಸಿದ್ದು ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಷೇರುಗಳು 2 ಶೇಕಡಾಗಿಂತ ಹೆಚ್ಚು ಏರಿಕೆಯಾಗಿ ನಿಫ್ಟಿಯಲ್ಲಿ ಟಾಪ್‌ ಗೇನರ್‌ ಎನಿಸಿದೆ. ಇದಲ್ಲದೇ ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ (APSEZ) BSE ಯಲ್ಲಿ ಒಂದು ಶೇಕಡಾಗಿಂತ ಹೆಚ್ಚು ಗಳಿಸಿದೆ. ಅದಾನಿ ಪವರ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್ ತಲಾ 5 ಶೇ.ದಷ್ಟು ಅಪ್ಪರ್ ಸರ್ಕ್ಯೂಟ್ ಮಟ್ಟವನ್ನು ತಲುಪಿವೆ.

ಅದಾನಿ ಸಮೂಹವು ಮಂಗಳವಾರ ಸುಮಾರು 7,374 ಕೋಟಿ ರೂ. ಮೌಲ್ಯದಷ್ಟು ಷೇರುಬೆಂಬಲಿತ ಹಣಕಾಸು ಪಾವತಿ ಮಾಡಿದೆ. ಲಭ್ಯವಿರೋ ಮಾಹಿತಿ ಪ್ರಕಾರ ಈ ಹಣಕಾಸಿನ ಮೆಚುರಿಟಿ ಅವಧಿಯು 2025ರವರೆಗೆ ಇತ್ತು. ಆದರೆ ಮಾರುಕಟ್ಟೆ ಏರಿಳಿತಗಳಿಂದ ಅದಾನಿ ಸಮೂಹವು ಅವಧಿಗೂ ಮುನ್ನವೇ ಮೊತ್ತವನ್ನು ಪಾವತಿ ಮಾಡಿದೆ. ಮತ್ತೊಂದೆಡೆ, ಅದಾನಿ ಎಂಟರ್‌ಪ್ರೈಸಸ್ ಅಂತಿಮವಾಗಿ NSE ಯ ʼಅಲ್ಪಾವಧಿಯ ಕಣ್ಗಾವಲು ಅಳತೆಯಿಂದ (ASM)ʼ ಹೊರಬಿದ್ದಿದೆ. ಕಳೆದ ಒಂದು ತಿಂಗಳಿನಿಂದ ಅದಾನಿ ಕಂಪನಿಯು NSE ಕಣ್ಗಾವಲಿಗೆ ಒಳಪಟ್ಟಿತ್ತು. ಇದೀಗ ಹೊರಬಿದ್ದಿರುವುದು ಹೂಡಿಕೆದಾರರಿಗೆ ವಿಶ್ವಾಸ ಮೂಡಿಸಿದೆ ಎನ್ನಲಾಗಿದೆ. ಹೀಗಾಗಿ ಅದಾನಿ ಷೇರುಗಳು ಹಸಿರು ಬಣ್ಣದ ಓಟ ಮುಂದುವರೆಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!