ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದಾನಿ ಗ್ರೂಪ್‌ನ ಎಲ್ಲಾ ಷೇರುಗಳು ಸಾಕಷ್ಟು ಜಿಗಿತ ಕಂಡಿದ್ದು, ಸಮೂಹದ ಪ್ರಮುಖ ಕಂಪನಿ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳ ಮಾರುಕಟ್ಟೆ ಮೌಲ್ಯ ಹತ್ತು ಲಕ್ಷ ರೂ. ದಾಟಿದೆ. ಹಿಂಡನ್‌ಬರ್ಗ್ ವರದಿ ನಂತರದ ಅತಿದೊಡ್ಡ ಏರಿಕೆ ಇದಾಗಿದೆ.
ಅದಾನಿ-ಹಿಂಡೆನ್‌ಬರ್ಗ್ ಸಂಶೋಧನಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸುಪ್ರೀಂ ಕೋರ್ಟ್ ಸಮಿತಿಯ ವರದಿ ಹೊರಬಂದಂತೆ ಅದಾನಿ ಗ್ರೂಪ್‌ನ ಷೇರುಗಳು ಮೇಲ್ಮುಖವಾಗಿ ಸಾಗುತ್ತಿವೆ.
ಈ ಹಿಂದೆ ಅಮೆರಿಕದ ಶಾರ್ಟ್ ಸೆಲ್ಲಿಂಗ್ ಫರ್ಮ್ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ಬಗ್ಗೆ ವರದಿ ಬಿಡುಗಡೆ ಮಾಡಿತ್ತು. ಇದರಲ್ಲಿ ಅದಾನಿ ಗ್ರೂಪ್ ಮೇಲೆ ಮನಿ ಲಾಂಡರಿಂಗ್ ಆರೋಪ ಮಾಡಲಾಗಿತ್ತು. ಅದಾನಿ ಗ್ರೂಪ್ ಈ ವರದಿಯ ಆರೋಪಗಳನ್ನು ನಿರಾಕರಿಸಿತ್ತು. ಆದರೆ ಈ ಸುದ್ದಿ ಹೊರಬಿದ್ದ ನಂತರ ಸಮೂಹದ ಷೇರುಗಳಲ್ಲಿ ಭಾರೀ ಕುಸಿತ ಕಂಡಿತ್ತು.
ಇದೀಗ, ಇದರಲ್ಲಿ ಭಾರತದ ಮಾರುಕಟ್ಟೆ ನಿಯಂತ್ರಕರಿಂದ ಯಾವುದೇ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂಬ ಸುಪ್ರೀಂ ಕೋರ್ಟ್ ನೇಮಕದ ಪರಿಣತ ಸಮಿತಿಯ ವರದಿ ಬೆನ್ನಲ್ಲೇ ಅದಾನಿ ಗ್ರೂಪ್‌ನ ಎಲ್ಲಾ ಷೇರುಗಳು ಶೇ.17ರಷ್ಟು ಏರಿಕೆ ಕಂಡಿವೆ.