ಕೊಡಗಿಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ: ಭದ್ರತಾ ವ್ಯವಸ್ಥೆಗಳ ಪರಿಶೀಲನೆ

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಸೆಕ್ಷನ್ 144 ಅಡಿಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದು, ಪೊಲೀಸ್ ಭದ್ರತಾ ವ್ಯವಸ್ಥೆಗಳ ಕುರಿತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿದರು.
ನಗರದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ವೃತ್ತ ನಿರೀಕ್ಷಕರು, ಡಿವೈಎಸ್‍ಪಿ ಮತ್ತು ಅಧಿಕಾರಿಗಳ ಸಭೆ ನಡೆಸಿದ ಅಲೋಕ್ ಕುಮಾರ್, ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸೂಚನೆಗಳನ್ನು ನೀಡಿದರು. ಚೆಕ್‌’ಪೋಸ್ಟ್’ಗಳಲ್ಲಿ ಬಿಗಿ ತಪಾಸಣೆ ನಡೆಸಬೇಕು. ಪ್ರವಾಸಿಗರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಆ.26ರಂದು ‘ಮಡಿಕೇರಿ ಚಲೋ’ ಹಾಗೂ ‘ಜನ ಜಾಗೃತಿ ಸಮಾವೇಶ’ ಆಯೋಜನೆಗೆ ಕರೆ ನೀಡಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಹೇಳಿದರು. ಕೊಡಗು ಜಿಲ್ಲೆ ಕೇರಳದೊಂದಿಗೆ ಗಡಿ ಹಂಚಿಕೊಂಡಿದ್ದು, ಸೂಕ್ಷ್ಮ ಪ್ರದೇಶವೂ ಆಗಿದೆ. ಮಾತ್ರವಲ್ಲದೇ 2015ರ ನವೆಂಬರ್ ತಿಂಗಳಲ್ಲಿ ಕೋಮು ಗಲಭೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಶಾಂತಿ ಕಾಪಾಡಲು ಕ್ರಮ: ಜಿಲ್ಲೆಯಲ್ಲಿ ಶಾಂತಿ ಕಾಪಾಡಲು 15 ಕೆಎಸ್‍ಆರ್‍ಪಿ ತುಕಡಿಗಳ ಸಾವಿರ ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಐಜಿಪಿ ಪ್ರವೀಣ್ ಮಧುಕರ್ ಪವಾರ್, ಚಾಮರಾಜನಗರ ಅಡಿಷನಲ್ ಎಸ್.ಪಿ. ಸುಂದರ್ ರಾಜ್ ಅವರುಗಳು ಮಡಿಕೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿ ಸಹಿತ ಜೀವ ರಕ್ಷಣೆಗೂ ಪೊಲೀಸ್ ಇಲಾಖೆ ಬದ್ದವಾಗಿದೆ. ಸಾರ್ವಜನಿಕರು ಯಾರೂ ಕೂಡ ಆತಂಕಪಡುವ ಅಗತ್ಯ ಇಲ್ಲ ಎಂದು ಅಲೋಕ್ ಕುಮಾರ್ ಅಭಯ ನೀಡಿದರು.
ಚೆಕ್‍ಪೋಸ್ಟ್ ತಪಾಸಣೆ: ಕೊಡಗು ಜಿಲ್ಲೆಗೆ ಗಡಿ ಹೊಂದಿಕೊಂಡಿರುವ ಕೊಪ್ಪ, ಕೊಡ್ಲಿಪೇಟೆ, ಕುಟ್ಟ, ಮಾಕುಟ್ಟ, ಸಂಪಾಜೆ, ಕರಿಕೆ ಮತ್ತಿತ್ತರ ಕಡೆಗಳಲ್ಲಿ ಈಗಾಗಲೇ ಚೆಕ್ ಪೋಸ್ಟ್’ಗಳನ್ನು ತೆರೆಯಲಾಗಿದೆ. ಚೆಕ್‍ಪೋಸ್ಟ್’ಗಳಲ್ಲಿ ಬಿಗಿಯಾಗಿ ತಪಾಸಣೆ ನಡೆಸಲಾಗುತ್ತಿದೆ. ಅದರಲ್ಲೂ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಮುಖ್ಯವಾಗಿ ಕೊಡಗು ಜಿಲ್ಲೆ ಪ್ರವಾಸೋದ್ಯಮದ ಪಟ್ಟಿಯಲ್ಲಿರುವ ಕಾರಣ ಸ್ಥಳೀಯರು ಹಾಗೂ ಪ್ರವಾಸಿಗರಿಗೂ ತೊಂದರೆಯಾಗದಂತೆ ವಿಶೇಷ ಗಮನ ಹರಿಸಲು ಸೂಚನೆ ನೀಡಲಾಗಿದೆ. ಎಲ್ಲಿಯೂ ವ್ಯತಿರಿಕ್ತ ಪರಿಣಾಮ ಬೀರಬಾರದೆನ್ನುವ ದೃಷ್ಟಿಯಿಂದ ಕೆಲವು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ಜನರೊಂದಿಗೆ ಇದ್ದೇವೆ: ಆ.18ರಂದು ನಡೆದ ಘಟನೆಗಳ ಕುರಿತು ಮಾಹಿತಿ ಪಡೆಯಲಾಗುತ್ತದೆ. ಅಂದಿನ ಎಲ್ಲಾ ಘಟನೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಉನ್ನತ ಅಧಿಕಾರಿಗಳು ಜಿಲ್ಲೆಗೆ ಬಾರದೇ ಬೆಂಗಳೂರಿನಲ್ಲಿ ಕುಳಿತಿದ್ದಾರೆ ಎಂಬ ಭಾವನೆ ಜನರಿಗೆ ಬರಬಾರದೆನ್ನುವ ಉದ್ದೇಶದಿಂದ ಖುದ್ದಾಗಿ ಇಲ್ಲಿಗೆ ಬಂದಿದ್ದೇನೆ. ಎಲ್ಲದರ ಕುರಿತು ಮಾಹಿತಿ ಪಡೆಯುತ್ತೇನೆ. ಪೊಲೀಸ್ ಇಲಾಖೆ ಸದಾ ಕಾಲ ಜನರೊಂದಿಗೆ ಇರುತ್ತದೆ. ನಿಷೇದಾಜ್ಞೆ ಜಾರಿಯಲ್ಲಿರುವ ಸಮಯದವರೆಗೆ ಪೊಲೀಸ್ ಬಂದೋಬಸ್ತ್ ಜಿಲ್ಲೆಯಲ್ಲಿ ಇರಲಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬದಲಾವಣೆಗೆ ಒತ್ತಡವಿರುವ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದರು.
ಈ ಸಂದರ್ಭ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಮಧುಕರ್ ಪವಾರ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಎ.ಅಯ್ಯಪ್ಪ, ಚಾಮರಾಜನಗರ ಅಡಿಷನಲ್ ಎಸ್.ಪಿ. ಸುಂದರ್ ರಾಜ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!