ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಘಾನಿಸ್ಥಾನವನ್ನು ತಾಲಿಬಾನ್ ನಾಟಕೀಯವಾಗಿ ವಶಪಡಿಸಿಕೊಂಡ ನಂತರ ಅಲ್ಲಿ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿದೆ. ಅಲ್ಲದೇ ಭಯೋತ್ಪಾದಕರಿಗೆ ಸುರಕ್ಷಿತ ಅಡಗುದಾಣವಾಗಿ ಮಾರ್ಪಡುತ್ತಿದೆ ಎಂದು ಭಾರತ ಕಳವಳ ವ್ಯಕ್ತಪಡಿಸಿದೆ.
ಈ ಕುರಿತು ಸ್ಪೇನ್ ನ ಮಲಗಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಮಾತನಾಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ “ಭಯೋತ್ಪಾದಕ ಗುಂಪುಗಳಾದ ಲಷ್ಕರ್ ಇ ತೈಬಾ ಮತ್ತು ಜೈಶ್ ಇ ಮೊಹಮ್ಮದ್ ಗಳಿಗೆ ಅಪಘಾನಿಸ್ಥಾನ ಸುರಕ್ಷಿತ ತಾಣವಾಗುತ್ತಿದೆ” ಎಂದಿದ್ದಾರೆ.
ಭಯೋತ್ಪಾದನೆಯು ಮಾನವಹಕ್ಕುಗಳ ಉಲ್ಲಂಘನೆ ಎಂದ ಅವರು “ಭಾರತವು ಕಳೆದ ಹಲವಾರು ದಶಕಗಳಿಂದ ಭಯೋತ್ಪಾದನೆಗೆ ಬಲಿಯಾಗಿದೆ. ಅದರಲ್ಲೂ ವಿಶೇಷವಾಗಿ ಯುಎನ್ ನಿಂದ ಗುರುತಿಸಲ್ಪಟ್ಟ ಲಷ್ಕರ್-ಎ-ತೈಬಾ, ಹರ್ಕತ್-ಉಲ್-ಮುಜಾಹಿದಿನ್ ಮತ್ತು ಜೈಶ್-ಎ-ಮೊಹಮ್ಮದ್ ಜೊತೆಗೆ ಅವರ ಬೆಂಬಲಿತ ಸಂಘಟನೆಗಳು ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿದ್ದಾರೆ. 2001 ರ ಸಂಸತ್ ದಾಳಿ, 2005 ದೆಹಲಿ ಬಾಂಬ್ ಸ್ಫೋಟಗಳು, 2008 ಮುಂಬೈ, 2016 ಪಠಾಣ್ಕೋಟ್ ಮತ್ತು ಉರಿ ಮತ್ತು 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಗಳಿಗೆ ಭಾರತ ಸಾಕ್ಷಿಯಾಗಿದೆ” ಎಂದು ಉಲ್ಲೇಖಿಸಿದ್ದಾರೆ.
ಇನ್ನು ಪಾಕಿಸ್ತಾನದಂತಹ ರಾಷ್ಟ್ರಗಳು ಭಯೋತ್ಪಾದನೆಯ ಕುರಿತು ದ್ವಂದ್ವ ನೀತಿ ಹೊಂದುವುದನ್ನು ಕಟುವಾಗಿ ಟೀಕಿಸಿದ ಅವರು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆಯೇ “ಭಯೋತ್ಪಾದನೆಯನ್ನು ದೇಶದ ವಿದೇಶಾಂಗ ನೀತಿಯ ಭಾಗವಾಗಿ ಬಳಸುವುದನ್ನು ಅಂತರಾಷ್ಟ್ರೀಯ ಸಮುದಾಯ ಖಂಡಿಸಬೇಕು. ಆದರೆ ಹಲವು ರಾಷ್ಟ್ರಗಳಿಗೆ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯವಿಲ್ಲ. ಆದ್ದರಿಂದಲೇ ಇದು ಅತ್ಯಂತ ಗಂಭೀರ ಕಾಳಜಿಯ ವಿಷಯವಾಗಿ ಹೊರಹೊಮ್ಮಿದೆ. ಈ ಭಯೋತ್ಪಾದಕರು ದೇಶಗಳ ಗಡಿಗಳನ್ನು ದಾಟಿ ಭಯೋತ್ಪಾದನಾ ಕೃತ್ಯ ನಡೆಸುತ್ತಿದ್ದಾರೆ ಮತ್ತು ಒಕ್ಕೂಟಗಳನ್ನು ರಚಿಸುತ್ತಿದ್ದಾರೆ. ಆ ಮೂಲಕ ಪ್ರಜಾಸತ್ತಾತ್ಮಕ ರಾಜ್ಯಗಳಿಗೆ ದೊಡ್ಡ ಸವಾಲಾಗಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.