ಕೋವಿಡ್ ಬೂಸ್ಟರ್ ಡೋಸ್ ಪೂರ್ಣಗೊಂಡ ಬೆನ್ನಿಗೇ ದೇಶದಲ್ಲಿ ಪೌರತ್ವ ಕಾಯ್ದೆ ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ನಿರೋಧಕ ಲಸಿಕಾ ಅಭಿಯಾನದಲ್ಲಿ ಮುನ್ನೆಚ್ಚರಿಕಾ ಡೋಸ್ ನೀಡಿಕೆ ಪೂರ್ಣಗೊಂಡ ಬಳಿಕ ಪೌರತ್ವ ಕಾಯ್ದೆ (ಸಿಎಎ) ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ಥಾನದಿಂದ ಆಗಮಿಸಿ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಹಿಂದು, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರೈಸ್ತ ವಲಸಿಗರಿಗೆ ಪೌರತ್ವ ಕಾಯ್ದೆಯ ಮೂಲಕ ಪೌರತ್ವ ನೀಡಲಾಗುತ್ತದೆ ಎಂದು ಮಂಗಳವಾರ ಶಾ ಹೇಳಿದ್ದಾರೆ.
ಸಂಸತ್ ಭವನದಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯನ್ನು ಭೇಟಿಯಾದ ಸಂದರ್ಭದಲ್ಲಿ ಶಾ ಈ ಭರವಸೆ ನೀಡಿದ್ದಾರೆ.

ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯವೈಖರಿ ಮತ್ತು ಸಾಂಸ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿಯೂ ಶಾ ಭರವಸೆ ನೀಡಿದರು. ಇದಲ್ಲದೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯೊಂದಿಗಿನ ಬಿಜೆಪಿ ರಾಜಕೀಯ ಕಲಹವನ್ನೂ ಅಧಿಕಾರಿ ಶಾ ಗಮನಕ್ಕೆ ತಂದರು. ಜತೆಗೆ ಭ್ರಷ್ಟಾಚಾರ ತನಿಖೆ ನಡೆಸಬೇಕಾಗಿರುವ 100 ಟಿಎಂಸಿ ನಾಯಕರ ಪಟ್ಟಿಯನ್ನೂ ಶಾ ಅವರಿಗೆ ನೀಡಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!