ರಾಶಿ ನೋಟು ಪತ್ತೆ ಬೆನ್ನಲ್ಲೇ ಕಾಡಿದ ಪ್ರಶ್ನೆ: ಅಷ್ಟಕ್ಕೂ ಬಂಗಾಳ ಸಚಿವನಿಗೆ ಗಂಟುಬಿದ್ದ ಅರ್ಪಿತಾ ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ನಿನ್ನೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದು, ಇದೀಗ ಅರ್ಪಿತಾ ಮುಖರ್ಜಿ ಬಂಧಿಸಿದೆ.

ಶನಿವಾರ ಬೆಳಿಗ್ಗೆ ಅರ್ಪಿತಾ ಮುಖರ್ಜಿಯನ್ನ ಬಂಧಿಸಲಾಗಿದೆ. ಅರ್ಪಿತಾ ಮುಖರ್ಜಿ ಮನೆಯಿಂದ ಸುಮಾರು 21 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದೆ .

ಇದಕ್ಕೂ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ಸಚಿವ ಪಾರ್ಥ ಚಟರ್ಜಿಯವ್ರನ್ನ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ಯಾರು ಈ ಅರ್ಪಿತಾ ಮುಖರ್ಜಿ?

ಇದೀಗ ಸಾಮಾಜಿಕ ಜಾಲತಾಣದಲ್ಲಿ ಅರ್ಪಿತಾ ಮುಖರ್ಜಿ ಯಾರು? ಸಚಿವ ಚಟರ್ಜಿ ಮತ್ತು ಅವರಿಗು ಇರುವ ಸಂಬಂಧ ಏನು? ಎಂಬ ಸಾಕಷ್ಟು ಪ್ರಶ್ನೆಗಳು ಕೇಳಿಬರುತ್ತಿವೆ.

ಇಡಿ ಅಧಿಕಾರಿಗಳ ಪ್ರಕಾರ ಅರ್ಪಿತಾ, ಸಚಿವ ಚಟರ್ಜಿ ಅವರ ನಿಕಟವರ್ತಿ. ಅಲ್ಲದೆ, ಆಕೆ ನಟಿಯು ಹೌದು. ಒಡಿಯಾ, ಬಂಗಾಳಿ ಮತ್ತು ಕೆಲ ತಮಿಳು ಸಿನಿಮಾಗಳಲ್ಲಿ ಈಕೆ ನಟಿಸಿದ್ದಾಳೆ.

ಅರ್ಪಿತಾ ಫೇಸ್​ಬುಕ್​ ಬಯೋ ಪ್ರಕಾರ, ಆಕೆ ಬಹುಮುಖ ಪ್ರತಿಭೆಯ ಬಹುಮುಖ ನಟಿ. ಹಲವು ಟಾಲಿವುಡ್​ ಸಿನಿಮಾಗಳಲ್ಲೂ ನಟಿಸಿದ್ದಾರಂತೆ. ಅವರು 2009 ರಲ್ಲಿ ಬಂಗಾಳಿ ಸೂಪರ್‌ಸ್ಟಾರ್ ಪ್ರೊಸೆನ್‌ಜಿತ್ ಚಟರ್ಜಿ ಅವರೊಂದಿಗೆ ‘ಮಾಮಾ ಭಗ್ನೆ’ ಮತ್ತು 2008 ರಲ್ಲಿ ನಟ ಜೀತ್ ಅವರೊಂದಿಗೆ ‘ಪಾರ್ಟ್‌ನರ್’ ಚಿತ್ರದಲ್ಲಿ ನಟಿಸಿದ್ದಾರೆ. ಇವರು 2019 ಮತ್ತು 2020ರಲ್ಲಿ ನಕ್ತಲಾ ಉದಯನ್ ಸಂಘ ಎಂಬ ಪಾರ್ಥ ಚಟರ್ಜಿಯವರ ದುರ್ಗಾಪೂಜಾ ಸಮಿತಿಯ ಪ್ರಚಾರದ ಪ್ರಮುಖರಾಗಿದ್ದಾರೆ.

ಚಟರ್ಜಿ ಅವರು ಆಗಾಗ ಅರ್ಪಿತಾ ಮನೆಗೆ ಭೇಟಿ ನೀಡುತ್ತಿದ್ದರು. ಇಬ್ಬರು ಅನೇಕ ರಾಜಕೀಯ ಮತ್ತು ರಾಜಕೀಯೇತರ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರ ನಡುವೆ ಹಣದ ವ್ಯವಹಾರವೂ ಇತ್ತೆಂದು ತಿಳಿದುಬಂದಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇಡಿ, ಇಂದು ದಿಢೀರ್​ ದಾಳಿ ನಡೆಸಿದೆ ಎಂದು ಹೇಳಲಾಗಿದೆ.

ಬಂಗಾಳದ ಗ್ರೂಪ್ ‘ಸಿ’ ಮತ್ತು ‘ಡಿ’ ಹಾಗೂ ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿನ ಹಗರಣದ ತನಿಖೆ ನಡೆಸುವಂತೆ ಕೋಲ್ಕತ ಹೈಕೋರ್ಟ್​ ನಿರ್ದೇಶಿಸಿತ್ತು. ಇದಾದ ಬಳಿಕ ಸಿಬಿಐ ಈ ಸಂಬಂಧ ಎಫ್​ಐಆರ್​ ದಾಖಲಿಸಿತ್ತು. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಬೆನ್ನಲ್ಲೇ ಪ್ರಕರಣದ ಮಧ್ಯಪ್ರವೇಶಿಸಿದ ಇಡಿ, ನಿನ್ನೆ ದಿಢೀರ್​ ದಾಳಿ ಮಾಡಿದೆ. ಈ ವೇಳೆ 20 ಕೋಟಿ ರೂಪಾಯಿ ನಗದು ಹಾಗೂ 20ಕ್ಕೂ ಹೆಚ್ಚು ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಬೆನ್ನಲ್ಲೇ ಸಚಿವ ಚಟರ್ಜಿ ಹಾಗೂ ಅರ್ಪಿತಾರನ್ನು ಇಡಿ ಬಂಧಿಸಿದೆ.

ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದಾರೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!