October 6, 2026
Tuesday, October 6, 2026
spot_img

ರಾತ್ರಿ ಸುರಿದ ಧಾರಾಕಾರ ಮಳೆಯ ಎಫೆಕ್ಟ್‌: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಟ್ರಾಫಿಕ್‌ ಜಾಮ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ಜನ ಸುಸ್ತಾಗಿದ್ದಾರೆ. ಸಂಜೆ ಒಂದು ಗಂಟೆ ಸುರಿದ ಮಳೆಯನ್ನೇ ಜನ ಸುಧಾರಿಸಿಕೊಳ್ಳುತ್ತಿದ್ದರು, ತದನಂತರ ರಾತ್ರಿ ಹತ್ತು ಗಂಟೆಯ ನಂತರ ಸತತ ನಾಲ್ಕು ಗಂಟೆಗಳ ಕಾಲ ಮಳೆ ಸುರಿದಿದೆ.

ತಗ್ಗು ಪ್ರದೇಶಗಳ ಒಳಕ್ಕೆ ನೀರು ನುಗ್ಗಿದ್ದು, ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನದಿಯಿಂದ ಹರಿದಿದೆ. ಮಲ್ಲೇಶ್ವರಂ ಹಾಗೂ ಯಶವಂತಪುರ ಸಂಪರ್ಕಿಸುವ ರಸ್ತೆ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿದೆ. ರಸ್ತೆಯಲ್ಲಿ ನಿಂತ ಭಾರಿ ನೀರಿನಲ್ಲಿ ಬೈಕ್‌‌ಗಳು ಕೆಟ್ಟು ನಿಂತಿದ್ದು, ಸವಾರರು ವಾಹನಗಳನ್ನು ನೀರಿನಲ್ಲೇ ತಳ್ಳಿಕೊಂಡು ಹೋಗುವ ದುಸ್ಥಿತಿ ಎದುರಾಗಿದೆ. ಇನ್ನು ಕೆ.ಆರ್‌. ಮಾರುಕಟ್ಟೆಯ ಒಳಕ್ಕೂ ನೀರು ತುಂಬಿದ್ದು, ಮೊಣಕಾಲಿನ ವರೆಗೆ ನೀರು ನಿಂತಿತ್ತು. ಇದರಿಂದಾಗಿ ವಾಹನ ಸವಾರರು, ವ್ಯಾಪಾರಿಗಳು ಹಾಗೂ ಗ್ರಾಹಕರು ಸಂಕಷ್ಟಕ್ಕೀಡಾಗಿದ್ದಾರೆ. ವ್ಯಾಪಾರಿಗಳು ತಮ್ಮ ಸರಕುಗಳನ್ನು ಪ್ಯಾಕ್‌ ಮಾಡಿಕೊಂಡು ಮನೆಗೆ ವಾಪಾಸ್‌ ತೆರಳಲು ಹರಸಾಹಸ ಮಾಡಿದ್ದಾರೆ.

ಎಲ್ಲೆಲ್ಲಿ ಟ್ರಾಫಿಕ್‌ ಜಾಮ್‌?

ಬೆಂಗಳೂರಿನಲ್ಲಿ ಮಳೆ ಹಾಗೂ ಟ್ರಾಫಿಕ್‌ ಜಾಮ್‌ ಎರಡೂ ಒಂದು ಪ್ಯಾಕೇಜ್‌ ಇದ್ದಂತೆ. ಒಂದು ಬಂದಮೇಲೆ ಇನ್ನೊಂದು ಬಂದೇ ಬರುತ್ತದೆ. ಬೆಂಗಳೂರು ಟ್ರಾಫಿಕ್‌ ಪೊಲೀಸರು ಟ್ರಾಫಿಕ್‌ ಜಾಮ್‌ ಹಾಗೂ ನಿಧಾನಗತಿಯ ಸಂಚಾರ ಎಲ್ಲೆಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ಎನ್‌ಜಿವಿ ಜಂಕ್ಷನ್‌ ಬಳಿ ಮಳೆ ನೀರು ನಿಂತಿದ್ದು, ಸೋನಿ ವರ್ಲ್ಡ್‌ ಕಡೆಗೆ ನಿಧಾನಗತಿಯ ಸಂಚಾರ, ವೆಂಕಟಾಲ ಮೇಲ್ಸೇತುವೆ ಬಳಿ ನೀರಿದೆ. ಹೀಗಾಗಿ ಇಲ್ಲಿಯೂ ನಿಧಾನಕ್ಕೆ ವಾಹನಗಳು ಮುಂದಕ್ಕೆ ಹೋಗುತ್ತಿವೆ. ಇನ್ನು ಕೋಗಿಲು ಮೇಲ್ಸೇತುವೆ ಬಳಿ ವಾಹನ ಕೆಟ್ಟು ನಿಂತಿದೆ, ಜೊತೆಗೆ ಮಳೆ ನೀರು ಇರುವ ಕಾರಣ ಟ್ರಾಫಿಕ್‌ ಜಾಮ್‌ ಆಗಿದೆ. ವಡ್ಡರಹಳ್ಳಿ ಬಳಿ ಮಳೆ ನೀರು ನಿಂತಿರುವುದರಿಂದ ಗೆದ್ದಲಹಳ್ಳಿ ಕಡೆಗೆ ಸಂಚಾರ ನಿಧಾನವಾಗಿದೆ. ಓಕಳಿಪುರಂ ಬಳಿ ನೀರು ನಿಂತಿರುವುದರಿಂದ ಲುಲು ಮಾಲ್ ಕಡೆಗೆ ವಾಹನ ಸಂಚಾರ ನಿಧಾನವಾಗಿದೆ ಎಂದು ಸಂಚಾರ ಪೊಲೀಸರು ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.

ಮಳೆ ನೀರು ನಿಂತಿರುವ ಹಿನ್ನೆಲೆಯಲ್ಲಿ ಕಾರ್ತಿಕ್‌ನಗರದಿಂದ ಮಹದೇವಪುರ ಕಡೆಗೆ, 17ನೇ ಮುಖ್ಯರಸ್ತೆಯಿಂದ ದೂಪನಹಳ್ಳಿ ಕಡೆಗೆ, ಓಲ್ಡ್ ಉದಯ ಟಿವಿಯಿಂದ ಜಯಮಹಲ್ ಕಡೆಗೆ, ಪಿಜಿಹಳ್ಳಿ ಬಸ್ ನಿಲ್ದಾಣದಿಂದ ಅರಮನೆ ಕ್ರಾಸ್ ಕಡೆಗೆ, ಸಿಎಲ್ ಕ್ರಾಸ್ ಕಂಟೋನ್ಮೆಂಟ್‌ನಿಂದ ಪೂರ್ವ ರಸ್ತೆ ಕಡೆಗೆ ಹಾಗೂ ಸಿಬಿಐ ಜಂಕ್ಷನ್ ಫ್ಲೈಓವರ್‌ನಲ್ಲಿ ನಿಧಾನಗತಿಯ ಸಂಚಾರವಿದೆ. ಅದೇ ರೀತಿ ಸೆಲಂ ಸೇತುವೆಯಿಂದ ಕಾರ್ತಿಕ್ ನಗರ ಕಡೆಗೆ, ಆಶೀರ್ವಾದಂ ಜಂಕ್ಷನ್‌ನಿಂದ ಒಪೇರಾ ಜಂಕ್ಷನ್ ಕಡೆಗೆ, ಹೆಬ್ಬಾಳ ಫ್ಲೈಓವರ್ ಡೌನ್‌ರಾಂಪ್‌ನಿಂದ ವಿಮಾನ ನಿಲ್ದಾಣದ ಕಡೆಗೆ, ರೇನ್‌ಬೋ ಸರ್ವಿಸ್ ರಸ್ತೆಯಿಂದ ಮಹದೇವಪುರ ಕಡೆಗೆ, ಕಸ್ತೂರಿ ನಗರ ಡೌನ್‌ರಾಂಪ್‌ನಿಂದ ಹೆಬ್ಬಾಳ ಕಡೆಗೆ ಹಾಗೂ ವಿಂಡ್ಸರ್ ಮ್ಯಾನರ್ ಸೇತುವೆಯಿಂದ ಹೈಗ್ರೌಂಡ್ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿದೆ.

Must Read