ʼಅಗ್ನಿಪಥ್ʼ ಪ್ರತಿಭಟನೆಗಳ ಹಿಂದೆ ಕೋಚಿಂಗ್‌ ಸೆಂಟರ್‌ಗಳ ಕೈವಾಡ? ಮಹತ್ವದ ಸಾಕ್ಷ್ಯ ಕಲೆಹಾಕಿದ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧ ದೇಶದ ಹಲವೆಡೆ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿಂದೆ ಸೇನಾಪಡೆಗಳ ನೇಮಕಾತಿಗೆ ಯುವಕರನ್ನು ಸಿದ್ಧಪಡಿಸುವ ಕೋಚಿಂಗ್ ಸಂಸ್ಥೆಗಳ ಕೈವಾಡ ಇರುವುದಾಗಿ ಬಿಹಾರ, ಆಂಧ್ರ ಮತ್ತು ತೆಲಂಗಾಣ ಪೊಲೀಸ್ ಪಡೆಗಳು ಸಾಕ್ಷ್ಯಗಳನ್ನು ಮುಂದಿಡುತ್ತಿವೆ. ಅನೇಕ ಶಿಕ್ಷಕರು ಮತ್ತು ಕೋಚಿಂಗ್ ಆಪರೇಟರ್‌ಗಳು ಪ್ರತಿಭಟನೆಗೆ ಕುಮ್ಮಕ್ಕು ನೀಡಿರುವುದರ ಬಗ್ಗೆ ಸಾಕ್ಷಗಳು ಲಭ್ಯವಾಗಿವೆ. ಆದರೆ ಈ ವಿಚಾರವನ್ನು ಕೋಚಿಂಗ್‌ ಸಂಸ್ಥೆಗಳು ಸ್ಪಷ್ಟವಾಗಿ ನಿರಾಕರಿಸಿವೆ.
ಆಂಧ್ರ ಪ್ರದೇಶದ ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಅಗ್ನಿಪತ್‌ ಯೋಜನೆ ವಿರೋಧಿಸಿ ರಣರಂಪ ಎಬ್ಬಿಸಿದ 45 ಜನರನ್ನು ರೈಲ್ವೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಯೋಜನೆಯ ವಿರುದ್ಧ ಸೇನಾ ಆಕಾಂಕ್ಷಿಗಳನ್ನು ಪ್ರಚೋದಿಸಿದ ಆರೋಪದ ಮೇಲೆ ಹಲವಾರು ಕೋಚಿಂಗ್ ಸೆಂಟರ್‌ಗಳನ್ನು ನಡೆಸುವ ಮಾಜಿ ಸೈನಿಕ ಅವುಲಾ ಸುಬ್ಬಾ ರಾವ್ ರನ್ನು ವಶಕ್ಕೆ ಪಡೆಯಲಾಗಿದೆ. ಸುಬ್ಬಾರಾವ್ ತಮ್ಮ ಸ್ವಾರ್ಥಕ್ಕಾಗಿ ಯುವಕರನ್ನು ರೊಚ್ಚಿಗೆಬ್ಬಿದರಾ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.
ಬಿಹಾರದಲ್ಲಿ, ಶನಿವಾರ ತಾರೆಗ್ನಾ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರತಿಭಟನಾಕಾರರ ಗುಂಪು ಮತ್ತು ಜಿಆರ್‌ಪಿ ಸಿಬ್ಬಂದಿ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದ ನಂತರ ಎರಡು ಕೋಚಿಂಗ್ ಸೆಂಟರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪಾಟ್ನಾ ಮತ್ತು ಬಿಹಾರದ ಇತರೆಡೆಗಳಲ್ಲಿ ಹಲವಾರು ಕೋಚಿಂಗ್ ಸೆಂಟರ್‌ಗಳು ಈ ಪ್ರತಿಭಟನೆಯಲ್ಲಿ ಭಾಗಿಯಾದ ಕುರಿತು ಮೊಬೈಲ್ ಕರೆ ದಾಖಲೆ, ವೀಡಿಯೊ ಮತ್ತು ಆಡಿಯೊ ಕ್ಲಿಪ್‌ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಬಿಹಾರದಲ್ಲಿ ವೀಡಿಯೊ ದೃಶ್ಯಗಳನ್ನು ಆಧರಿಸಿ 700 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಕೆಲವರು ರೈಲ್ವೆ ನೇಮಕಾತಿ ಮಂಡಳಿಯ ಪರೀಕ್ಷಾ ಫಲಿತಾಂಶಗಳ ವಿರುದ್ಧ ನಡೆಸಲಾಗಿದ್ದ ಪ್ರತಿಭಟನೆಯಲ್ಲಿಯೂ ಭಾಗಿಯಾಗಿದ್ದರು. ಕೆಲವು ಕೋಚಿಂಗ್ ಸೆಂಟರ್ ನಿರ್ವಾಹಕರು ಕಳೆದ ಬಾರಿಯೂ ವಿದ್ಯಾರ್ಥಿಗಳನ್ನು ಪ್ರಚೋದಿಸಿದ ಆರೋಪ ಎದುರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರ ಮತ್ತು ತೆಲಂಗಾಣ ಪೊಲೀಸರು ಸಿಕಂದರಾಬಾದ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದವರಲ್ಲಿ ಸುಬ್ಬರಾವ್ ಅವರ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಸುಮಾರು 100 ಅಭ್ಯರ್ಥಿಗಳಿದ್ದಾರೆ ಎಂಬ ವಿಚಾರವೂ ಹೊರಬಿದ್ದಿದೆ. ಸಾಯಿ ಡಿಫೆನ್ಸ್ ಅಕಾಡೆಮಿಯ ನಿರ್ದೇಶಕ ಸುಬ್ಬಾ ರಾವ್ ಅವರು ಪ್ರಚೋದನಕಾರಿ ವಾಟ್ಸಾಪ್ ಸಂದೇಶಗಳನ್ನು ಹಂಚಿಕೊಂಡಿರುವ ಮತ್ತು ಪ್ರತಿಭಟನೆಗೆ ಒಂದು ದಿನ ಮೊದಲು ಸಿಕಂದರಾಬಾದ್ ನಲ್ಲಿ ಹಿಂಸಾಚಾರ ಪ್ರಚೋದಿಸುವ ಮಾತುಗಳನ್ನಾಡಿದ್ದ ಎಂಬ ವಿಚಾರ ತಿಳಿದುಬಂದಿದೆ. ಒಂಬತ್ತು ಕೋಚಿಂಗ್‌ ಸೆಂಟರ್‌ ಗಳ ಒಡೆಯ ರಾವ್‌ ನನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಶನಿವಾರ ಬಂಧಿಸಲಾದ 45 ಯುವಕರು ತೆಲಂಗಾಣದ ವಿವಿಧ ಜಿಲ್ಲೆಗಳಿಂದ ನಗರಕ್ಕೆ ಬಂದಿದ್ದರು. ಬಿಹಾರದ ಪಾಟ್ನಾ ನಗರದಲ್ಲಿ ಗಲಭೆಯಲ್ಲಿ ಕೋಚಿಂಗ್‌ ಸೆಂಟರ್‌ ಗಳ ಪಾತ್ರದ ಕುರಿತು ತೀವ್ರ ತನಿಖೆಗೆ ಆದೇಶಿಸಲಾಗಿದೆ. ನಗರದಲ್ಲಿ ಒಟ್ಟು ಎಂಟು ಕೋಚಿಂಗ್ ಸೆಂಟರ್‌ ಗಳು ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದರ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಚಿಂಗ್ ಸೆಂಟರ್‌ಗಳು ಗಲಭೆಗೆ ಉತ್ತೇಜಿಸುವ ವೀಡಿಯೊಗಳು ಮತ್ತು ವಾಟ್ಸಾಪ್ ಸಂದೇಶಗಳು ಬಂಧಿತರಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೀಡಿಯೊವೊಂದರಲ್ಲಿ, ತಾನು ಕೋಚಿಂಗ್ ಸೆಂಟರ್ ಆಪರೇಟರ್ ಎಂದು ಹೇಳಲಾದ ವ್ಯಕ್ತಿಯೊಬ್ಬ, ಅಗ್ನಿಪಥ್ ಯೋಜನೆಯನ್ನು ವಿರೋಧಿಸಲು ಯಾವುದೇ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಿದ್ಧರಾಗಿ ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿರುವುದನ್ನು ಕಂಡುಬಂದಿದೆ. “ನೀವು ಉತ್ಸಾಹ, ಪುರುಷತ್ವ ಮತ್ತು ಧೈರ್ಯವನ್ನು ತೋರಿಸಲು ಬಯಸಿದರೆ, ಅದನ್ನು ಸರ್ಕಾರದ ಮುಂದೆ ತೋರಿಸಿ, ನಿಮ್ಮ ಪೋಷಕರವ ಮುಂದಲ್ಲ” ಎಂದು ಆತ ವಿಡಿಯೋದಲ್ಲಿ ಹೇಳುತ್ತಿರುವುದು ವಿಡಿಯೋದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!