ಅಗ್ನಿಪಥ್ ಹಿಂಸಾಚಾರಕ್ಕೆ ವಿಪಕ್ಷಗಳಿಂದ ತುಪ್ಪ ಸುರಿಯುವ ಕೆಲಸ: ಆರಗ ಜ್ಞಾನೇಂದ್ರ

ಹೊಸದಿಗಂತ ವರದಿ, ಮದ್ದೂರು :

ಕೇಂದ್ರದ ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರಕ್ಕೆ ವಿರೋಧ ಪಕ್ಷಗಳು ತುಪ್ಪ ಸುರಿಯುವ ಕೆಲಸ ಮಾಡುತ್ತಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದರು.
ಪ್ರಧಾನಿ ನರೇಂದ್ರಮೋದಿ ಭೇಟಿ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ತಾಲೂಕಿನ ಸೋಮನಹಳ್ಳಿ ಸಮೀಪ ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಹಾಗೂ ಬಿಜೆಪಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ದೇಶದ ರಕ್ಷಣೆ ಹಾಗೂ ಯುವಕರಿಗೆ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಪ್ರಧಾನಿ ನರೇಂದ್ರಮೋದಿ ಅಗ್ನಿಪಥ್ ಯೋಜನೆ ಜಾರಿಗೆ ತಂದಿದ್ದಾರೆ. ಯೋಜನೆ ಅನುಷ್ಠಾನಕ್ಕೂ ಮುನ್ನ ಕಳೆದ ಎರಡು ವರ್ಷಗಳ ಕಾಲ ಮಾಜಿ ಸೈನಿಕರೊಂದಿಗೆ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸುವ ಮೂಲಕ ಒಮ್ಮತದೊಂದಿಗೆ ಈ ಯೋಜನೆ ಜಾರಿಗೊಳಿಸಿದ್ದಾರೆ. ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕಾಗಿ ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಅಪಪ್ರಚಾರ ನಡೆಸುವ ಮೂಲಕ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿವೆ ಎಂದು ಕಿಡಿಕಾರಿದರು.
ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ನಡೆದ ಚುನಾವಣೆಗೆ ಕಾಂಗ್ರೆಸ್ ಗೆಲುವು ಮುಂದಿನ ವಿಧಾನ ಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಚುನಾವಣೆ ಎಂದ ಮೇಲೆ ಸೋಲು-ಗೆಲುವು ಸಹಜವಾಗಿರುತ್ತದೆ. ಸೋಲನ್ನು ಕಾರ‌್ಯಕರ್ತರು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!