ಅಗ್ನಿಪಥ ನಮ್ಮ ಸೇನೆಯನ್ನು ಜಗತ್ತಿನಲ್ಲಿಯೇ ಶ್ರೇಷ್ಠ ಸೇನೆಯನ್ನಾಗಿಸುತ್ತಿದೆ-ರಾಜನಾಥ್‌ ಸಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಸೇನಾ ನೇಮಕಾತಿಗಳಲ್ಲಿ ಗಣನೀಯ ಬದಲಾವಣೆ ತರುವ ನಿಟ್ಟಿನಲ್ಲಿ ಜಾರಿಗೊಂಡ ಮಹತ್ವಾಕಾಂಕ್ಷಿ ಯೋಜನೆಯಾದ ʼಅಗ್ನಿಪಥ್‌ʼ ಜಾರಿಯಾದ ಸಂದರ್ಭದಲ್ಲಿ ಭಾರೀ ವಿರೋಧಗಳು ವ್ಯಕ್ತವಾಗಿದ್ದವು. ಸೇನೆಯ ಸಾಮರ್ಥ್ಯ ವನ್ನು ಹೆಚ್ಚಿಸಲಿರೋ ಈ ಪ್ರಮುಖ ಯೋಜನೆಯ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾತನಾಡಿದ್ದು ಈ ಅಗ್ನಿಪಥ ಯೋಜನೆಯು ಸೇನೆಗೆ ಬಲ ತುಂಬಲಿದೆ ಎಂದಿದ್ದಾರೆ.

ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವಾಗ ‘ಅಗ್ನಿವೀರ್’ಗಳಿಗೆ ಶಿಕ್ಷಣವನ್ನು ಮುಂದುವರೆಸಲು ಮತ್ತು ಅವರ ಪರಿಣತಿಗೆ ಅನುಗುಣವಾಗಿ ಅವರಿಗೆ ಸೂಕ್ತವಾದ ಕೌಶಲ್ಯ ಪ್ರಮಾಣಪತ್ರಗಳನ್ನು ನೀಡಲು ಅನುಕೂಲವಾಗುವಂತೆ ರಕ್ಷಣಾ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವಾಲಯಗಳು ಒಪ್ಪಂದಗಳು ಮತ್ತು ಎಂಒಯುಗಳಿಗೆ ಸಹಿ ಹಾಕಿದ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ರಕ್ಷಣಾ ಸಚಿವರು ಹೇಳಿದ್ದಿಷ್ಟು “ಅಗ್ನಿಪಥವು ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾರಿ ಮಾಡಲಾದ ಮಹತ್ತರ ಬದಲಾವಣೆಯಾಗಿದ್ದು ಭಾರತೀಯ ಸಶಸ್ತ್ರ ಪಡೆಗಳನ್ನು ವಿಶ್ವದಲ್ಲೇ ಅತ್ಯುತ್ತಮವಾಗಿ ಪರಿವರ್ತಿಸುವ ʼಬಲವರ್ಧಕʼವಾಗಿ ಕೆಲಸ ಮಾಡುತ್ತಿದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ಉನ್ನತ ತಂತ್ರಜ್ಞಾನ ಮತ್ತು ಯುದ್ಧ-ಸಿದ್ಧತೆಗಳನ್ನು ಒಳಗೊಂಡಂತೆ ಸಮರ್ಥ ಯುವಶಕ್ತಿಯ ಮೂಲಕ ಸೇನೆಯ ಬಲವನ್ನು ಹೆಚ್ಚಿಸಲಿದೆ”

ಕಳೆದ ವರ್ಷ ಜೂನ್‌ನಲ್ಲಿ ಘೋಷಿಸಲಾದ ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ಸೇನೆಗೆ 20,000, ವಾಯುಸೇನೆ ಮತ್ತು ನೌಕಾಸೇನೆಗೆ ತಲಾ 3000ದಂತೆ ಒಟ್ಟೂ 26 ಸಾವಿರ ಅಗ್ನಿವೀರರನ್ನು ಆಯ್ಕೆ ಮಾಡಲಾಗಿದ್ದು ಅವರು ಈಗಾಗಲೇ ತರಬೇತಿ ಪಡೆಯುತ್ತಿದ್ದಾರೆ. ಇವರಲ್ಲಿ 25 ಶೇಕಡಾದಷ್ಟು ಅಗ್ನಿವೀರರು ನಾಲ್ಕು ವರ್ಷಗಳ ನಂತರ ಇನ್ನೂ 15 ವರ್ಷಗಳ ಕಾಲ ಸೇನಾಪಡೆಗಳಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಲಿದ್ದಾರೆ. ಉಳಿದ 75 ಶೇಕಡಾದಷ್ಟು ಅಗ್ನಿವೀರರು ಸೇವಾ ನಿಧಿ ನಿರ್ಗಮನ ಪ್ಯಾಕೇಜ್‌ನೊಂದಿಗೆ ತಲಾ 11.71 ಲಕ್ಷ ರೂ.ಗಳನ್ನು ಪಡೆಯಲಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಅಗ್ನಿವೀರರಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರಸ್ತುತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್ (NIOS) ಮತ್ತು ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ (IGNOU) ಜೊತೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು ಇದರಡಿಯಲ್ಲಿ 12 ನೇ ತರಗತಿ ಪ್ರಮಾಣಪತ್ರಗಳು ಮತ್ತು ಸ್ನಾತಕೋತ್ತರ ಪದವಿಗಳನ್ನು ಈ ಅಗ್ನಿವೀರರಿಗೆ ಪ್ರಶಸ್ತಿಯನ್ನಾಗಿ ನೀಡಲಾಗುತ್ತದೆ. ಇದರಿಂದಾಗಿ ಅಗ್ನಿವೀರರು ತಮ್ಮ ಶಿಕ್ಷಣವನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಮತ್ತು ಹೆಚ್ಚುವರಿ ಗುಣಗಳು ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!