Tuesday, August 16, 2022

Latest Posts

ಕೃಷಿಯೆಂದರೆ ಬರೀ ಗೋಳಲ್ಲ- ವಿದೇಶಿ ಹಣ್ಣುಗಳ ದೇಸಿ ಮಾರುಕಟ್ಟೆ ಕಂಡುಕೊಳ್ತಿದಾರೆ ರೈತರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಬದಲಾಗುತ್ತಿರುವ ಕಾಲ ಮಾನಕ್ಕೆ ತಕ್ಕಂತೆ ಮಾನವನ ಜೀವನ ಶೈಲಿಯೂ ಬದಲಾಗುತ್ತದೆ. ಅಂತೆಯೇ ಆಹಾರ, ವಿಹಾರ, ಉಡುಗೆ ತೊಡುಗೆಗಳೆಲ್ಲವೂ ಬದಲಾಗುತ್ತಲೇ ಇರುತ್ತದೆ. ಅಂತೆಯೇ ಭಾರತದಲ್ಲೂ ಕೂಡ ಜನಜೀವನ ಹೊಸ ಹೊಸ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಪಿಜ್ಜಾ-ಕೋಕ್ ಕಲ್ಚರ್‌, ಮ್ಯಾಕ್‌ಡೊನಾಲ್ಡೀಕರಣಗಳಿಂದ ಹೊರಬಂದು ಆರೋಗ್ಯಕರ ಆಹಾರದತ್ತ ಮುಖ ಮಾಡುತ್ತಿದ್ದು ನಿಧಾನವಾಗಿ ಸ್ವಾದಿಷ್ಟ, ಪೌಷ್ಟಿಕ ಆಹಾರಗಳಿಗೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಕೆಲ ವಿಲಕ್ಷಣ ಹಾಗೂ ವಿರಳವೆಂದು ಹೇಳಲಾಗುವ ತರಕಾರಿ, ಹಣ್ಣು ಹಂಪಲುಗಳಿಗೆ ಭಾರತದಲ್ಲಿ ಬೇಡಿಕೆ ಜಾಸ್ತಿಯಾಗುತ್ತಿದೆ. ಬ್ರೋಕ್ಲಿ, ಕಿವಿಹಣ್ಣು ಡ್ರ್ಯಾಗನ್‌ ಫ್ರುಟ್‌, ಅವಕಾಡೋ, ಮ್ಯಾಂಡರಿನ್ ಕಿತ್ತಳೆ, ಫ್ಯೂಜಿ ಸೇಬು, ಲಿಚಿ ಹೀಗೆ ಕೆಲ ಸ್ವಾದಿಷ್ಟ ಹಣ್ಣುಗಳನ್ನು ಜನರು ಅದರಲ್ಲೂ ವಿಶೇಷವಾಗಿ ನಗರ ಪ್ರದೇಶದಲ್ಲಿರುವವರು ನೆಚ್ಚಿಕೊಳ್ಳುತ್ತಿದ್ದಾರೆ.

ಬೇಡಿಕೆ ಹೆಚ್ಚುತ್ತಿದ್ದಂತೆ ಅವುಗಳನ್ನು ವಿದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಜಪಾನ್‌ನ ಫ್ಯೂಜಿ ಸೇಬುಗಳು ಮತ್ತು ಇತರ ರೀತಿಯ ಹಸಿರು ಸೇಬುಗಳು, ಕೆಂಪು ದ್ರಾಕ್ಷಿಗಳು, ಖರ್ಜೂರ, ಕಿವಿ ಹಣ್ಣುಗಳು, ವಿವಿಧ ರೀತಿಯ ಮ್ಯಾಂಡರಿನ್ ಕಿತ್ತಳೆ  ಮತ್ತು ಹಲವಾರು ಇತರ ಸಿಟ್ರಸ್ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಅವುಗಳನ್ನು ಈಗ ಭಾರತದಲ್ಲೇ ಬೆಳೆಯಲಾಗುತ್ತಿದೆ.

ಭಾರತವು ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ತರಕಾರಿ ಹಾಗೂ ಹಣ್ಣು ಹಂಪಲುಗಳ ಉತ್ಪಾದಕನಾಗಿದೆ. ಈ ರೀತಿಯ ವಿರಳ ಹಣ್ಣುಗಳಿಗೆ ಬೇಡಿಕೆ ಹೆಚ್ಚಾದಂತೆಲ್ಲ ಅವುಗಳನ್ನು ಭಾರತದಲ್ಲೇ ಬೆಳೆಯುವ ಪ್ರಯೋಗಗಳು ಯಶಸ್ವಿಯಾಗಿವೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯು ಅತ್ಯುತ್ತಮ ಗುಣಮಟ್ಟದ ಲೆಟಿಸ್ (ಒಂದು ಬಗೆಯ ಹಸಿರು ತರಕಾರಿ) ಅನ್ನು ಉತ್ಪಾದಿಸುತ್ತದೆ. ಹಿಮಾಚಲ ಪ್ರದೇಶವು ಅವಕಾಡೋ (ಬೆಣ್ಣೆಹಣ್ಣು) ಗಳನ್ನು ಬೆಳೆಯುತ್ತಿದೆ. ಭಾರತದ ವೈವಿಧ್ಯಮಯ ವಾತಾವರಣವು ಇವುಗಳನ್ನು ಬೆಳೆಯುವ ಸಾಧ್ಯತೆಗೆ ಪುಷ್ಟಿ ನೀಡುತ್ತದೆ. ಸರ್ಕಾರವೂ ಕೂಡ ಜಾಗತಿಕ ಬೇಡಿಕೆ ಹೆಚ್ಚಿರುವ ಈ ಹಣ್ಣುಗಳನ್ನು ಬೆಳೆಯಲು ಸ್ಥಳೀಯ ರೈತರಿಗೆ ಉತ್ತೇಜನ ನೀಡಿದ್ದು, ವಿದೇಶಿ ಹಣ್ಣುಹಂಪಲುಗಳನ್ನು ಭಾರತದಲ್ಲೇ ಈಗ ಬೆಳೆಯಲಾಗುತ್ತಿದೆ. ಇದರ ಪರಿಣಾಮವಾಗಿ 2018ರಲ್ಲಿ 3 ಬಿಲಿಯನ್‌ ಡಾಲರುಗಳಷ್ಟಿದ್ದ ಹಣ್ಣುಹಂಪಲುಗಳ ಆಮದು ಮಾಡಿಕೊಂಡಿದ್ದರೆ ಇದು 2019ರಲ್ಲಿ ಆಮದಿನ ಪ್ರಮಾಣವು 1.2ಮಿಲಿಯನ್‌ ಡಾಲರ್‌ ಗೆ ಇಳಿಕೆಯಾಗಿದೆ.

ಜಪಾನಿನ ಫ್ಯೂಜಿ ಸೇಬಿಗೆ ಬದಲಾಗಿ ಕಾಶ್ಮೀರದ ಲಾಲ್‌ ಅಂಬ್ರಿ ಸೇಬನ್ನು ಬೆಳೆಯಲಾಗುತ್ತಿದೆ. ಇನ್ನು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ತಮಿಳುನಾಡು, ಒಡಿಶಾ, ಗುಜರಾತ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ಹಲವು ಈಶಾನ್ಯ ರಾಜ್ಯಗಳಲ್ಲಿ ಡ್ರ್ಯಾಗನ್ ಹಣ್ಣಿನ ಕೃಷಿ ಹೆಚ್ಚಾಗಿದೆ. ಕೋಸುಗಡ್ಡೆ, ಐಸ್ ಲೆಟಿಸ್, ಬಣ್ಣಬಣ್ಣದ ಕ್ಯಾಪ್ಸಿಕಂ, ಶತಾವರಿ, ಸೆಲರಿ, ಪಾರ್ಸ್ಲಿ, ಬ್ರಸೆಲ್ ಮೊಗ್ಗುಗಳು, ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ ಮತ್ತು ಎಲೆಕೋಸು ಸೇರಿದಂತೆ US ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಂದ ಭಾರತವು ಬೃಹತ್ ಶ್ರೇಣಿಯ ತರಕಾರಿಗಳನ್ನು ಆಮದು ಮಾಡಿಕೊಳ್ಳುತ್ತದೆ. ಇವುಗಳನ್ನು ವರ್ಷಪೂರ್ತಿ ಬೆಳೆಯಬಹುದಾಗಿದ್ದು ಈ ಬೆಳೆಗಳನ್ನು ಬೆಳೆಯಲು ರೈತರನ್ನು ಪ್ರೇರೇಪಿಸಲು ವಿವಿಧ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಪ್ರೋತ್ಸಾಹಕ ಯೋಜನೆಗಳನ್ನು ಪ್ರಾರಂಭಿಸಿವೆ. ಹರಿಯಾಣ, ಮಹಾರಾಷ್ಟ್ರ ಮತ್ತು ಕರ್ನಾಟಕವು ಈ ಹಸಿರು ತರಕಾರಿಗಳ ಉತ್ಪಾದನೆಯಲ್ಲಿ ಮುಂಚೂಣಿ ಸ್ಥಾನದಲ್ಲಿವೆ.

ಇನ್ನು ಕೀವಿ ಹಣ್ಣುಗಳ ಉತ್ಪಾದನೆಯು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಕೇರಳದಲ್ಲಿ ನಡೆಯುತ್ತದೆ. ಬೆರ್ರಿ ಉತ್ಪಾದನೆಯೂ ಹೆಚ್ಚುತ್ತಿದೆ. ನೈನಿತಾಲ್, ಡೆಹ್ರಾಡೂನ್ ಮತ್ತು ಮಹಾಬಲೇಶ್ವರದಲ್ಲಿ ಸ್ಟ್ರಾಬೆರಿ ತೋಟಗಳು ತಲೆ ಎತ್ತಿವೆ. ಭಾರತದ ಹೊಸ ಯುಗದ ರೈತರು ವಿದೇಶಿ ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ಇತರ ಆಹಾರ ಉತ್ಪನ್ನಗಳನ್ನು ಬೆಳೆಯುವಲ್ಲಿ ಸೈ ಎನ್ನಿಸಿಕೊಂಡಿದ್ದಾರೆ. ಉತ್ಪಾದನೆಗೆಗಿಂತಲೂ ಜಾಸ್ತಿ ಬೇಡಿಕೆ ಇರುವುದರಿಂದ ಈ ಬೆಳೆಗಳು ಹೆಚ್ಚು ಲಾಭದಾಯಕವೂ ಆಗಿದ್ದು ರೈತರ ಮೊಗದಲ್ಲಿ ಸಂತೋಷಕ್ಕೆ ಕಾರಣವಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss