ಕಾರ್ಕೀವ್’ನಲ್ಲಿರುವ ವಿದ್ಯಾರ್ಥಿಗಳ ಏರ್ ಲಿಫ್ಟ್ ವಿಳಂಬ: ಆತಂಕದಲ್ಲಿ ಕೊಡಗಿನ ಕುಟುಂಬ

ಹೊಸದಿಗಂತ ವರದಿ, ಮಡಿಕೇರಿ:

ಯುದ್ಧಗ್ರಸ್ತ ಉಕ್ರೇನ್’ನಲ್ಲಿ ಸಿಲುಕಿರುವ ವೈದ್ಯಕೀಯ ವಿದ್ಯಾರ್ಥಿಗಳನ್ನು ಏರ್ ಲಿಫ್ಟ್ ಮಾಡುವಲ್ಲಿ ವಿಳಂಬವಾಗುತ್ತಿದ್ದು, ಕೊಡಗಿನ ಹಲವು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸುತ್ತಿರುವ ಕಾರ್ಕೀವ್ ಪಟ್ಟಣದಲ್ಲೇ ಸುಮಾರು 20ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಾಸವಿದ್ದು, ಇವರನ್ನು ಏರ್ ಲಿಫ್ಟ್ ಮಾಡಲು ಯಾವುದೇ ಕ್ರಮ ಇದುವರೆಗೆ ನಡೆದಿಲ್ಲ ಎಂದು ಮೂಲತಃ ಕೊಡಗಿನ ಗೋಣಿಕೊಪ್ಪದವರಾಗಿದ್ದು, ಪ್ರಸಕ್ತ ಉದ್ಯೋಗ ನಿಮಿತ್ತ ಕತಾರ್’ನಲ್ಲಿರುವ ಬಲ್ಲಡಿಚಂಡ ಸಂಪತ್ ಅವರು ‘ಹೊಸದಿಗಂತ’ದೊಂದಿಗೆ ದೂರಿಕೊಂಡಿದ್ದಾರೆ.
ಸಂಪತ್ ಅವರ ಪುತ್ರ ಶೀತಲ್ ಅವರು ಕೂಡಾ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಕಾರ್ಕೀವ್’ನ ಫ್ಲಾಟ್ ಒಂದರಲ್ಲಿ ವಾಸವಿದ್ದಾರೆ. ಇವರು ಇರುವ ಪ್ರದೇಶದ ಸುತ್ತಮುತ್ತ ಬಾಂಬ್ ದಾಳಿಗಳು ನಡೆಯುತ್ತಿದ್ದು, ಯುದ್ಧ ಟ್ಯಾಂಕರ್’ಗಳ ಓಡಾಟ ಬಿರುಸಾಗಿದೆ ಎಂದು ಸಂಪತ್ ವಿವರಿಸಿದ್ದಾರೆ.
ತಮ್ಮ ಪುತ್ರ 4-5 ಸ್ನೇಹಿತರೊಂದಿಗೆ ಇದ್ದು, ಅಪಾಯದ ಸೈರನ್ ಮೊಳಗುತ್ತಿದ್ದಂತೆ ನೆಲಮಹಡಿಗೆ ತೆರಳುತ್ತಾರೆ. ದೇವರ ಕೃಪೆಯಿಂದ ತನ್ನ ಪುತ್ರ ಇದುವರೆಗೆ ಸುರಕ್ಷಿತವಾಗಿದ್ದಾರೆ. ಆದರೆ ಮೆಟ್ರೋ ಸುರಂಗ ಹಾಗೂ ಬಂಕರ್’ಗಳಲ್ಲಿರುವವರು ಕುಡಿಯುವ ನೀರು, ಶೌಚಾಲಯ, ಸ್ನಾನದ ವ್ಯವಸ್ಥೆಗಳಿಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ಯುದ್ಧದ ತೀವ್ರತೆ ಅಷ್ಟೊಂದು ಇಲ್ಲದ ಪ್ರದೇಶದಲ್ಲಿರುವವರನ್ನು ಏರ್ ಲಿಫ್ಟ್ ಮಾಡಲು ಕ್ರಮಕೈಗೊಂಡಿದೆ. ಆದರೆ ಯುದ್ಧದ ತೀವ್ರತೆ ಇರುವ ಪ್ರದೇಶಗಳಲ್ಲಿರುವವರನ್ನು ಕರೆತರಲು ಕೇವಲ ಮಾತುಕತೆ ನಡೆಯುತ್ತಿದೆ. ಈ ಪ್ರದೇಶದಲ್ಲಿರುವವರು ಗಡಿ ಪ್ರದೇಶಗಳಿಗೆ ತೆರಳುವುದಕ್ಕೂ 1300-1500 ಕಿ.ಮೀ.ಕ್ರಮಿಸಬೇಕಿದ್ದು, ಸೂಕ್ತ ಸಂಚಾರ ವ್ಯವಸ್ಥೆಯೂ ಇಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದು ಸಂಪತ್ ಅಳಲು ತೋಡಿಕೊಂಡರು.
ಮಂಗಳವಾರ ಸುಮಾರು 15 ವಿದ್ಯಾರ್ಥಿಗಳ ತಂಡ ಸುಮಾರು 1500 ಕಿ.ಮೀ.ದೂರದ ಪಟ್ಟಣಕ್ಕೆ ತೆರಳುವ ಸ್ವಯಂ ನಿರ್ಧಾರ ಕೈಗೊಂಡಿದ್ದು, ಶೀತಲ್’ನ ಸ್ನೇಹಿತನೊಬ್ಬನ ಚಿಕ್ಕಪ್ಪ ಆ ಪಟ್ಟಣದಲ್ಲಿರುವುದರಿಂದ ಅವರ ಮೂಲಕ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಲಿದ್ದಾರೆ. ಆ ಬಳಿಕವೇ ಏರ್ ಲಿಫ್ಟ್’ಗೆ ಕ್ರಮವಾಗುವ ಸಾಧ್ಯತೆಗಳಿವೆ ಎಂದ ಅವರು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ತುರ್ತುಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕೆಲವು ಮಾಧ್ಯಮಗಳಲ್ಲಿ ಮಾತ್ರ ಏರ್ ಲಿಫ್ಟ್ ಬಗ್ಗೆ ಹಾಗೂ ತಮ್ಮ ಪುತ್ರ ತಾಯ್ನಾಡಿಗೆ ತಲುಪಿರುವುದಾಗಿ ವರದಿಯಾಗುತ್ತಿಸೆ. ಆದರೆ ತನ್ನ ಪುತ್ರ ಸೇರಿದಂತೆ ಹಲವಾರು ಭಾರತೀಯ ವಿದ್ಯಾರ್ಥಿಗಳು ಇನ್ನೂ ಉಕ್ರೇನ್’ನ ಅಪಾಯಕಾರಿ ಪ್ರದೇಶದಲ್ಲಿದ್ದಾರೆ ಎಂದು ಅವರು ನೋವು ತೋಡಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!