ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲದ ಅವಧಿಯಲ್ಲಿ ಉಲ್ಬಣಿಸುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನೇತೃತ್ವದ ದೆಹಲಿ ಸರ್ಕಾರವು ಕಟ್ಟುನಿಟ್ಟಿನ ‘ವಿಂಟರ್ ಆಕ್ಷನ್ ಪ್ಲಾನ್’ ಅನ್ನು ಸಿದ್ಧಪಡಿಸಿದೆ.
ಸ್ವಚ್ಛ ಗಾಳಿ, ಆರೋಗ್ಯವಂತ ಕುಟುಂಬಗಳು ಮತ್ತು ಮಾಲಿನ್ಯ ಮುಕ್ತ ದೆಹಲಿಯನ್ನು ನಿರ್ಮಿಸುವ ಗುರಿ ಹೊಂದಿರುವ ಈ ಸಮಗ್ರ ಯೋಜನೆಗಳು ಮುಂಬರುವ ನವೆಂಬರ್ 1 ರಿಂದ ಫೆಬ್ರವರಿ 28ರವರೆಗೆ ಇಡೀ ದೆಹಲಿಯಾದ್ಯಂತ ಕಡ್ಡಾಯವಾಗಿ ಜಾರಿಯಾಗಲಿದೆ.
‘ನೋ ಪಿಯುಸಿ, ನೋ ಫ್ಯುಯೆಲ್’
ವಾಹನ ಮಾಲೀಕರು ತಮ್ಮ ವಾಹನಕ್ಕೆ ಮಾನ್ಯತೆ ಇರುವ PUC(ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ) ಹೊಂದಿಲ್ಲದಿದ್ದರೆ, ದೆಹಲಿಯ ಯಾವುದೇ ಪೆಟ್ರೋಲ್ ಪಂಪ್ಗಳಲ್ಲಿ ಪೆಟ್ರೋಲ್, ಡೀಸೆಲ್, ಸಿಎನ್ಜಿ ಅಥವಾ ಎಲ್ಪಿಜಿ ಇಂಧನವನ್ನು ಖರೀದಿಸಲು ಅವಕಾಶವಿರುವುದಿಲ್ಲ.
ಹೊರರಾಜ್ಯಗಳ ವಾಹನಕ್ಕೆ ನಿಷೇಧ
ದೆಹಲಿಯ ಹೊರಗೆ ನೋಂದಣಿಯಾಗಿರುವ ಮತ್ತು ಬಿಎಸ್-VI ಹೊರಸೂಸುವಿಕೆ ಮಾನದಂಡಗಳಿಗಿಂತ ಕಡಿಮೆ ಇರುವ ವಾಹನಗಳು ದೆಹಲಿ ನಗರದೊಳಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
AI ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ
ಧೂಳಿನಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಕಟ್ಟಡ ನಿರ್ಮಾಣ ಪ್ರಕ್ರಿಯೆಗಳು, ಧ್ವಂಸ (ಡೆಮಾಲಿಷನ್) ಕಾರ್ಯಾಚರಣೆಗಳು ಹಾಗೂ ನಿರ್ಮಾಣ ಸಾಮಗ್ರಿಗಳ ಸಾಗಣೆಯ ಮೇಲೆ ತೀವ್ರ ನಿಯಂತ್ರಣಗಳನ್ನು ಹೇರಲಾಗಿದೆ.
ಈ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ನಿರ್ಮಾಣ ಪ್ರದೇಶಗಳನ್ನು ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾಗಳ ಮೂಲಕ ಸರ್ಕಾರದ ನಿಯಂತ್ರಣ ಕೊಠಡಿಯಿಂದ ನೇರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಈಗಾಗಲೇ ನಿಯಮ ಉಲ್ಲಂಘಿಸಿದ ಸಂಸ್ಥೆಗಳಿಗೆ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಶೇ 50 ರಷ್ಟು ‘ವರ್ಕ್ ಫ್ರಮ್ ಹೋಮ್’
ರಸ್ತೆಗಳಲ್ಲಿ ವಾಹನ ದಟ್ಟಣೆ ತಗ್ಗಿಸಲು ಶೇಕಡಾ 50 ರಷ್ಟು ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲು ಸೂಚಿಸಲಾಗಿದೆ. ಇದರೊಂದಿಗೆ ಎಲೆಕ್ಟ್ರಿಕ್ ಬಸ್ಗಳು, ಮೆಟ್ರೋ ಸೇವೆಗಳು ಹಾಗೂ ಕೊನೆಯ ಮೈಲಿ ಸಂಪರ್ಕದ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ.
ಐಐಟಿ ದೆಹಲಿ ಜೊತೆ ಒಪ್ಪಂದ
ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಕಡಿಮೆ ಅಗಲವಿರುವ ರಸ್ತೆಗಳಲ್ಲೂ ಯಾಂತ್ರೀಕೃತ ರಸ್ತೆ ಗುಡಿಸುವಿಕೆಸೌಲಭ್ಯವನ್ನು ವಿಸ್ತರಿಸಲು ಅನುಮೋದನೆ ನೀಡಲಾಗಿದೆ. ದೆಹಲಿಯ 250 ವಾರ್ಡ್ಗಳ ವ್ಯಾಪ್ತಿಯ ಸುಮಾರು 609 ಕಿಮೀ ಉದ್ದದ 854 ರಸ್ತೆಗಳನ್ನು ಇದಕ್ಕಾಗಿ ಗುರುತಿಸಲಾಗಿದೆ.
ಇದನ್ನೂ ಓದಿ:
ಮುಂದಿನ 5 ವರ್ಷಗಳ ಕಾಲ ಐಐಟಿ ದೆಹಲಿ ಜೊತೆ ಕರಾರು ಮಾಡಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ. ಈ ವ್ಯವಸ್ಥೆಯು ಗಾಳಿಯಲ್ಲಿರುವ PM2.5 ಮತ್ತು PM10 ಮಾಲಿನ್ಯಕಾರಕ ಕಣಗಳ ಮೂಲಗಳನ್ನು ದಿನದ 24 ಗಂಟೆಯೂ ನಿರಂತರವಾಗಿ ಪತ್ತೆಹಚ್ಚಿ ವಿಶ್ಲೇಷಿಸಲಿದೆ.
ಮಾಲಿನ್ಯದ ಹಾಟ್ಸ್ಪಾಟ್ಗಳು ಮತ್ತು ನಿರ್ಮಾಣ ಸ್ಥಳಗಳ ಜಂಟಿ ತಪಾಸಣೆಯನ್ನು ನಗರಾಭಿವೃದ್ಧಿ ಕಾರ್ಯದರ್ಶಿ ವಿವೇಕ್ ಪಾಂಡೆ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ತಂಡವು ಈಗಾಗಲೇ ಚುರುಕುಗೊಳಿಸಿದೆ.



