ಹೊಸದಿಗಂತ ವರದಿ,ಮಡಿಕೇರಿ:
ಕೊಡಗಿನ ಶ್ರೀಮಂಗಲ ಹೋಬಳಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಭಾನುವಾರದಿಂದ ಹುಲಿ ಸೆರೆಗೆ ಸಾಕಾನೆಗಳು ಆಗಮಿಸಿವೆ. ಮತ್ತಿಗೋಡು ಸಾಕಾನೆ ಶಿಬಿರದಿಂದ ಅಜಯ್ ಮತ್ತು ಶ್ರೀರಾಮ್ ಸಾಕಾನೆ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.
ಅರವಳಿಕೆ ತಜ್ಞ ಡಾ. ಚಿಟ್ಯಪ್ಪ ಹಾಗೂ ಶಾರ್ಪ್ ಶೂಟರ್ ರಂಜನ್ ಸಹ ಸ್ಥಳಕ್ಕೆ ಆಗಮಿಸಿದ್ದಾರೆ.
ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಮೇಲುಸ್ತುವಾರಿಯಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ. ವೆಸ್ಟ್ ನೆಮ್ಮಲೆಯಲ್ಲಿ ಜಾನುವಾರುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದ ಸ್ಥಳದಲ್ಲಿ ಜಾನುವಾರುವಿನ ಕಳೆಬರದೊಂದಿಗೆ ರಾತ್ರಿ ವೇಳೆ ಹುಲಿ ಸೆರೆಗೆ ಬೋನ್ ಇರಿಸಲಾಗಿದೆ. ಸಂಕೇತ್ ಪೂವಯ್ಯ ಅವರು ಸ್ಥಳದಲ್ಲಿ ಕಾರ್ಯಾಚರಣೆ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿ ಮಡಿಕೇರಿ ವನ್ಯಜೀವಿ ಡಿ.ಎಫ್. ಓ. ನೆಹರು, ತಿತಿಮತಿ ಎಸಿಎಫ್ ಗೋಪಾಲ್, ಶ್ರೀಮಂಗಲ ಆರ್. ಎಫ್. ಓ. ಅರವಿಂದ್ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.ಸ್ಥಳೀಯ ಪ್ರಮುಖರಾದ ಪಲ್ವಿನ್ ಪೂಣಚ್ಚ, ಮಾಣೀರ ವಿಜಯ ನಂಜಪ್ಪ, ಚೊಟ್ಟೆಯಾಡಮಾಡ ವಿಶು ಸೇರಿದಂತೆ ಪ್ರಮುಖರು ಕಾರ್ಯಾಚರಣೆ ಜೊತೆ ಇದ್ದರು.