ಜನರ ಆಶೀರ್ವಾದ ಇರೋವರೆಗೂ ನನ್ನನ್ನು ಯಾರೂ ಅಲ್ಲಾಡಿಸೋಕೆ ಆಗಲ್ಲ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್;

ರಾಜ್ಯದ ಜನರ ಆಶೀರ್ವಾದ ಇರೋವರೆಗೂ ನನ್ನನ್ನು ಯಾರೂ ಅಲ್ಲಾಡಿಸೋಕೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 22.45 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿಗರಿಗೆ ನಿರ್ಮಿಸಲಾಗಿರುವ ಕೊಠಡಿಗಳು, ಡಾರ್ಮಿಟರಿ, ಪಾರ್ಕಿಂಗ್, ಉದ್ಯಾನ ಮತ್ತಿತರ ಮೂಲಸೌಕರ್ಯಗಳು ಮತ್ತು ಮಹಿಳಾ ಅಭಿವೃದ್ಧಿ ನಿಗಮದಿಂದ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳು ಮತ್ತು ಅತಿಥಿಗೃಹವನ್ನು ಉದ್ಘಾಟಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು 17 ಸ್ಥಾನ ಗೆದ್ದರು. ನಾವು 9 ಸ್ಥಾನ ಗೆದ್ದೆವು. ಜೆಡಿಎಸ್ 2 ಸ್ಥಾನ ಗೆದ್ದಿತು. ಅವರು ಏನೂ ಮಾಡದೇ ನೀವು ಅವರನ್ನು ಗೆಲ್ಲಿಸುತ್ತೀರಿ. ಏನೂ ಮಾಡದೇ ಬಿಜೆಪಿ ಪ್ರಚಾರ ಪಡೆಯುತ್ತದೆ. ಹಿಂದುಗಳು, ಹಿಂದುತ್ವದ ಹೆಸರಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ. ಈ ನಾಡು ಉಳಿಯಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು. ನಮ್ಮ ಸರ್ಕಾರ ಇನ್ನೂ ಮೂರುವರೆ ವರ್ಷ ಇರುತ್ತದೆ. ಆ ಅವಧಿಯಲ್ಲಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿಯವರು ಧರ್ಮ, ಆಚಾರ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಇಂತಹ ಕೆಲಸ ಮಾಡಿದ್ದಾರಾ? ಈ ದೇವಸ್ಥಾನಕ್ಕೆ ಕೆಳವರ್ಗದ ಜನರೇ ಜಾಸ್ತಿ ಬರೋದು. ದೇಶ, ವಿದೇಶಗಳಿಂದಲೂ ಸಹ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಯಲ್ಲಮ್ಮ ತಾಯಿ ಬಹಳ ಶಕ್ತಿ ದೇವತೆ ಅಂತ ನಂಬಿದ್ದಾರೆ. ಆದರೆ ದೇವರು ಕೂಡ ಕೆಟ್ಟದ್ದು ಮಾಡಿ ಎಂದು ಬಯಸುವುದಿಲ್ಲ. ದೇವರು ಮತ್ತು ಧರ್ಮ ಮನುಷ್ಯನನ್ನು ಪ್ರೀತಿಸಿ ಎನ್ನುತ್ತವೆ. ಬಿಜೆಪಿಯವರ ರೀತಿ ಧರ್ಮದ ಹೆಸರಲ್ಲಿ ಜಾತಿ ಹೆಸರಲ್ಲಿ ಸಮಾಜ ಒಡೆಯಿರಿ ಎಂದು ಹೇಳುವುದಿಲ್ಲ. ಬಸವಣ್ಣನೂ ಸಹ ಇವನಾರವ ಎಂದೆನಿಸದಿರಯ್ಯ ಅಂತ ಹೇಳಿದ್ದಾರೆ.

ಎಲ್ಲರ ಸರ್ವೋದಯಕ್ಕಾಗಿಯೇ ನಾವು ಶಕ್ತಿ ಯೋಜನೆ ಜಾರಿ ಮಾಡಿದ್ದು, ಗೃಹಲಕ್ಷ್ಮಿ ಹಣದಲ್ಲಿ ಮಹಿಳೆಯರು ಊರಿಗೆ ಹೋಳಿಗೆ ಊಟ ಹಾಕುತ್ತಿದ್ದಾರೆ. ಅತ್ತೆ ಸೊಸೆಗೆ ಜಗಳ ಶುರುವಾಗುತ್ತದೆ ಅಂತಾ ಬಿಜೆಪಿಯವರು ಹೇಳುತ್ತಾರೆ. ಜಗಳ ಆಯ್ತಾ? ಬರೀ ಬುರುಡೆ ಹೊಡೆಯುತ್ತಾರೆ ಎಂದು ವಾಗ್ದಾಳಿ ಮಾಡಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!