ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶದತ್ತ ಎಲ್ಲರ ಕಣ್ಣು ಹೊರಳಿದೆ. ಇತ್ತ ಫಲಿತಾಂಶಕ್ಕೆ ಮುನ್ನವೇ ಮುಂದಿನ ಸಿಎಂ ಅಜಿತ್ ಪವಾರ್ ಎಂಬ ಪೋಸ್ಟರ್, ಬ್ಯಾನರ್‌ಗಳು ಕೆಲವೊಂದು ಕಡೆಗಳನ್ನು ಕಂಡು ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.
ಪುಣೆಯಲ್ಲಿ ಕಂಡು ಬಂದಿರುವ ಈ ಬ್ಯಾನರ್ ಅನ್ನು ಪಕ್ಷದ ಮುಖಂಡ ಸಂತೋಷ್ ನಂಗರೆ ಹಾಕಿದ್ದಾರೆ ಎನ್ನಲಾಗಿದೆ.
ಫಲಿತಾಂಶದ ಕುರಿತ ಹಸಿಬಿಸಿ ಚರ್ಚೆಗಳ ನಡುವೆಯೇ ‘ಅಜಿತ್ ಪವಾರ್ ಮುಂದಿನ ಮುಖ್ಯಮಂತ್ರಿ’ ಎಂದು ಬರೆದಿರುವ ಬ್ಯಾನರ್ ಸುದ್ದಿ ಈಗ ಸಂಚಲನ ಸೃಷ್ಟಿಸಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ನೆಕ್ ಟು ನೆಕ್ ಫೈಟ್ ಇದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ, ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಅಜಿತ್ ಪವಾರ್ ಬಣ) ಇದ್ದರೆ, ಕಾಂಗ್ರೆಸ್ ಬಣದಲ್ಲಿ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಇವೆ.
ಆಡಳಿತಾರೂಢ ಮಹಾಯುತಿಯು ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಹೆಚ್ಚಿನ ಎಕ್ಸಿಟ್ ಪೋಲ್ ಗಳು ಮಹಾ ವಿಕಾಸ್ ಅಘಾಡಿ (MVA) ಹೆಚ್ಚಿನ ಬಲ ಪ್ರದರ್ಶನ ನೀಡುತ್ತವೆ ಎಂದು ಭವಿಷ್ಯ ನುಡಿದಿವೆ.
ಈ ನಡುವೆ ಅಜಿತ್ ಪವಾರ್ ಅವರ ಈ ಪೋಸ್ಟರ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇನ್ನು ಈ ಪೋಸ್ಟರ್ ವೈರಲ್ ಆಗ್ತಿದ್ದಂತೆ ಅದನ್ನು ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.