ಅಲಾ ಪಿಲಿ ಬುಡ್ತೆರ್‌ಗೆ…ಬಲಾ.. ಬಲಾ.. ಬಲಿಪ್ಪೂ …ಬಲಿಪ್ಪೂ…: ಉಡುಪಿ ಜಿಲ್ಲೆಯಲ್ಲಿ ಮೈರೋಮಾಂಚನಗೊಳಿಸಿದ ಪಿಲಿಕೋಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಲಾ ಪಿಲಿ ಬುಡ್ತೆರ್‌ಗೆ. ಬತ್ತುಂಡು ತೂಲೆ, ಪಾರ್‍ದ್ ಬತ್ತುಂಡ ತೂಲೆ. ತೂವೊಂದು ಪೋಲ. ಪಡ್ಡಾಯಿ ಕಲೊಕು ಪೋತುಂಡುಗೆ. ಕಾರ್‌ಡ್ ಕುಲ್ಲುದು ತೂವೊಡ್ಚಿ ಬತ್ತುದು ಪಿಲಿ ಪತ್ತುಂಡ್. ಜಾಗ್ರತೆ.. ಬಲಾ.. ಬಲಾ.. ಬಲಿಪ್ಪೂ …

ಇದು ದೇಶ, ವಿದೇಶಗಳಲ್ಲಿಯೂ ಪ್ರಸಿದ್ಧಿಯನ್ನು ಪಡೆದಿರುವ ಅನಾದಿಕಾಲದಿಂದಲೂ ವಾಡಿಕೆಯಂತೆ ದ್ವೈವಾರ್ಷಿಕವಾಗಿ ನಡೆಯುವ ಉಡುಪಿ ಜಿಲ್ಲೆಯ ಕಾಪುವಿನ ಶ್ರೀ ಬ್ರಹ್ಮಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದ ಪಿಲಿಕೋಲ (ಹುಲಿಕೋಲ)ದ ಜನಸಾಗರದ ನಡುವೆ ಕೇಳಿ ಬರುತ್ತಿದ್ದ ಮಾತುಗಳು.


ಮೇ ೪ರ ಶನಿವಾರ ಸಂಪ್ರದಾಯ ಬದ್ಧವಾಗಿ ನಡೆದ ಈ ಪಿಲಿಕೋಲವು ತುಳುನಾಡಿನ ಇತರೆಡೆಗಳಲ್ಲಿನ ದೈವಾರಾಧನೆಗಿಂತ ಭಿನ್ನವಾಗಿದ್ದು, ಜಾನಪದ, ಧಾರ್ಮಿಕ ನಂಬಿಕೆ ನಡಾವಳಿಗಳು ಮೇಳೈಸಿದೆ.

ತುಳುವರ ವಿಶಿಷ್ಟ ಜನಪದ ಆಚರಣೆಗಳಲ್ಲಿ ಒಂದಾಗಿರುವ ಭೂತಾರಾಧನೆಯಲ್ಲಿ ಗಮನ ಸೆಳೆದಿರುವ ಅನಾದಿಕಾಲದಿಂದಲೂ ವಾಡಿಕೆಯಂತೆ ಕಾಪುವಿನ ದೈವಸ್ಥಾನದಲ್ಲಿ ಈ ಪಿಲಿಕೋಲವು ನಡೆದಿದ್ದು, ಇಲ್ಲಿ ಮಾರ ಗುರಿಕಾರ ವರ್ಗದವರ ಉಸ್ತುವಾರಿಯಲ್ಲಿ ಕಾಪು ಪಡುಗ್ರಾಮದ ಭೈರಗುತ್ತು, ದೊರಕಲಗುತ್ತು ಮತ್ತಿತರ ೧೬ ಕಾಣಿಕೆ ಮನೆತನದವರ ಪಾಲ್ಗೊಳ್ಳುವಿಕೆಯಲ್ಲಿ ಪಿಲಿಕೋಲದ ಧಾರ್ಮಿಕ ಆಚರಣೆಗಳು ನಡೆಯಿತು.

ಹಾಗೂ ಮುಗ್ಗೇರ್ಕಳ, ತನ್ನಿಮಾನಿಗ, ಬಬ್ಬರ್ಯ, ಗುಳಿಗ, ಪರಿವಾರ ದೈವಗಳ ನೇಮೋತ್ಸವವೂ ಜರಗಿತು.

ಹತ್ತಿರದ ಕೆರೆಯಲ್ಲಿ ಪಿಲಿದೈವ ನರ್ತಕ ಸ್ನಾನಾದಿ ಕಾರ್ಯ ಮುಗಿಸಿ ಬಳಿಕ ದೈವಸ್ಥಾನದ ಮುಂಭಾಗದಲ್ಲಿ ತೆಂಗಿನ ಗರಿಗಳಿಂದ ತಯಾರಿಸಲಾದ ಸಿರಿಯಿಂದ ಮಾಡಿದ ಒಲಿಮದೆ(ಒಲಿಗುಂಡ) ಗುಂಡದೊಳಗೆ ಹುಲಿವೇಷದ ಬಣ್ಣಗಾರಿಕೆ, ಸಂಪ್ರದಾಯಗಳೊಂದಿಗೆ ಸಿದ್ಧತೆಗಳನ್ನು ನಡೆಸಿದ ಬಳಿಕ ಪಿಲಿಕೋಲದ ದೈವ ವೇಷಧಾರಿಯು ಸಿರಿ ಒಲಿಗಳಿಂದಲೇ ನಿರ್ಮಿತ ಪಂಜರದಿಂದ ಹುಲಿಯಂತೆ ಆರ್ಭಟಿಸುತ್ತಾ ವೈಭವದಿಂದ ಹೊರ ಬಂದು ಬಳಿಕ ಬೇಟೆಗೆ ಹೊರಟಿತ್ತು.

ಇತರೇ ದೈವಗಳ ಕೋಲಗಳಂತೆ ಹತ್ತಿರದಿಂದ ಹುಲಿಕೋಲವನ್ನು ವೀಕ್ಷಿಸಲಾಗುವುದಿಲ್ಲ. ದೈವಕ್ಕೆ ಕೋಳಿ ಮತ್ತು ಹಾಲನ್ನು ಹರಕೆಯಾಗಿ ಭಕ್ತರು ಸಮರ್ಪಿಸುತ್ತಾರೆ.

ಪಿಲಿಕೋಲವನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿದ್ದು, ಹುಲಿ ವೇಷಧಾರಿಯನ್ನು ಹಗ್ಗಹಾಕಿ ನಿಯಂತ್ರಿಸಿದರೂ ಜನನಿಬಿಡ ಪ್ರದೇಶದಲ್ಲಿ (ಆಯ ಕಟ್ಟಿನ ಸ್ಥಳ ಹೊರತು ಪಡಿಸಿ) ಅಟ್ಟಾಡಿಸಿಕೊಂಡು ಹೋಗುವಾಗ ಸಾರ್ವಜನಿಕರು ಭಯಭೀತರಾಗಿ ಹುಲಿಯ ಕೈಯಿಂದ ತಪ್ಪಿಸಿಕೊಳ್ಳಲು ಎಲ್ಲೆಂದರಲ್ಲಿ ಓಡುವ ದೃಶ್ಯ ಕಂಡು ಬಂದಿತ್ತು. ಹೆದ್ದಾರಿಯ ಪ್ರದೇಶದಲ್ಲೂ ಜನಸಾಗರವೇ ಈ ಪಿಲಿಕೋಲಕ್ಕೆ ಸಾಕ್ಷಿ ನುಡಿಯುತ್ತಿತ್ತು. ಬೇಟೆಗೆ ಹೊರಟ ಹುಲಿ ಸಂಜೆ ವೇಳೆಗೆ ದೈವಸ್ಥಾನಕ್ಕೆ ವಾಪಸ್ಸಾಗುವ ಮೂಲಕ ವಿಜೃಂಭಣೆಯ ಪಿಲಿಕೋಲಕ್ಕೆ ತೆರೆಬಿದ್ದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!