ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶ್ರೀಮಂತ, ಬಡವರ ನಡುವಿನ ಅಂತರ ಹೆಚ್ಚಾಗಿದೆ: ಸಚಿವ ಕೃಷ್ಣ ಬೈರೇಗೌಡ

ಹೊಸದಿಗಂತ ವರದಿ, ರಾಯಚೂರು :

ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ದೇಶದ ಜಿಡಿಪಿ ಮತ್ತು ಉದ್ಯೋಗ ಸೃಷ್ಠಿ ಕಡಿಮೆ ಆಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಎರಡರ ಪ್ರಮಾಣ ಹೆಚ್ಚಿತ್ತು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ೧೦ ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿ ಕಡಿಮೆ ಆಗಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಿದೆ ಎಂದರು.

ತೆರಿಗೆ ಕಟ್ಟುವ ವಿಚಾರದಲ್ಲಿ ಬಂಗಾರದ ಮೊಟ್ಟೆ ಇಡುವ ಕೋಳಿ ಕರ್ನಾಟಕ. ಹೆಚ್ಚಿನ ತೆರಿಗೆ ನೀಡುವ (ರಾಜ್ಯದ) ಈ ಕೋಳಿಯ ಕತ್ತನ್ನು ಹಿಚಕುತ್ತಿದೆ ಕೇಂದ್ರ ಸರ್ಕಾರ. ಕೇಂದ್ರ ಧೋರಣೆಯಿಂದಾಗಿ ರೈತರ ಸ್ಥಿತಿ ಶೋಚನೀಯವಾಗುತ್ತಿದೆ. ರಾಜ್ಯಕ್ಕೆ ಕಡಿಮೆ ಬರ ಪರಿಹಾರದ ಮೊತ್ತವನ್ನು ಕೇಂದ್ರ ನೀಡಿದ್ದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯದ ಮೆಟ್ಟಿಲನ್ನು ಏರಿದೆ . ರಾಜ್ಯ ಸರ್ಕಾರ ಈ ಕುರಿತು ನ್ಯಾಯಾಲಯವೂ ಸಹ ಸತ್ಯ ಕಂಡುಬರುತ್ತಿದೆ ಎಂದು ಹೇಳಿದೆ ಎಂದರು.

ಕಾಂಗ್ರೆಸ್ ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡಿಲ್ಲ. ಟಾರ್ಗೆಟ್ ಮಾಡಿರುವುದು ಬಿಜೆಪಿ. ಪ್ರಜ್ವಲ್‌ಗೆ ಹಾಕುವ ಮತ ಮೋದಿಗೆ ಹಾಕಿದಂತೆ ಅಂದರು. ಅವರು ಪ್ರಜ್ವಲ್ ರೇವಣ್ಣನನ್ನು ಸೋಲಿಸಬೇಕಿತ್ತು ಅದಕ್ಕಾಗಿ ಹಾಗೆ ಮಾಡಿದರು ಎಂದು ತಿಳಿಸಿದರು.
ಪ್ರಜ್ವಲ್ ಅವರ ಚಾಲಕ ಬಿಜೆಪಿಯವರಿಗೆ ಮಾತ್ರ ವಿಡಿಯೋ ನೀಡಿದ್ದ. ಎರಡು ದಿನದ ಮೊದಲು ವೀಡಿಯೋ ರಿಲೀಸ್ ಮಾಡಿದ್ದು ಅವರೇ. ಜನತಾದಳ ಸೋಲೋದಕ್ಕೆ ಪ್ಲಾನ್ ಮಾಡಿದ್ದರು. ಎಲೆಕ್ಷನ್ ಮುಗಿದ ಮೇಲೆ ಅದಕ್ಕೂ ನಮಗೂ ಏನು ಸಂಬoಧ ಇಲ್ಲ ಅಂತ ಬಿಜೆಪಿ ಹೇಳುತ್ತಿದೆ. ಡೈವರ್ಸ್ ಕೊಡುವುದಕ್ಕೆ ಪೀಠಿಕೆ ಹಾಕುತ್ತಿದ್ದಾರೆ ಬಿಜೆಪಿ. ಜೆಡಿಎಸ್ ನವರಿಗೆ ಬಿಜೆಪಿ ಚಂಬು ಕೊಡುತ್ತಿದೆ ಎಂದು ಕುಟುಕಿದರು.
ಕುಮಾರಸ್ವಾಮಿ ಅವರನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡರು. ಕುಮಾರಸ್ವಾಮಿ ಅವರಿಂದ ಮೋದಿಯನ್ನು ಹೊಗಳಿಸಿಕೊಂಡರು.

ಬಿಜೆಪಿ ಯೂಸ್ ಆ್ಯಂಡ್ ಥ್ರೋ ಪಾಲಿಟಿಕ್ಸ್ ಮಾಡುತ್ತಿದೆ. ಎಲ್ಲಿಂದ ವೀಡಿಯೋ ಬಂತು ಅನ್ನುವುದು ಮುಖ್ಯನಾ?. ಮಹಿಳೆಯರ ಮಾನ ಹರಣ ಆಗೋದು ಮುಖ್ಯನಾ?. ಇವತ್ತು ಸಂತ್ರಸ್ತ ಕುಟುಂಬದವರು ಹಿಂದೂಗಳು. ಮರ್ಯಾದಸ್ತ ಕುಟುಂಬದವರು ಇದ್ದಾರೆ. ಯಾರಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಇದಕ್ಕೆ ಯಾರು ಜವಾಬ್ದಾರರು ಎಂದರು.

ಇಡೀ ಪ್ರಪಂಚದಲ್ಲಿ ಇದು ಅತ್ಯಂತ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ. ಒಬ್ಬ ಸಂಸದ ತನ್ನ ಪ್ರಭಾವ ಬೆಳೆಸಿ ಅಮಾಯಕ ಮಹಿಳೆಯರನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ತನಿಖೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಅತ್ಯಂತ ದಕ್ಷ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ನಡೆಯುತ್ತಿದೆ. ನಿಷ್ಪಕ್ಷಪಾತವಾಗಿ ಶಿಕ್ಷೆ ಕೊಡುವುದೇ ನಮ್ಮ ಸರ್ಕಾರದ ನಿಲುವು. ದುಡುಕಿ ಯಾವುದೇ ಹೆಜ್ಜೆಯನ್ನು ಇಡುತ್ತಿಲ್ಲ ಕಾನೂನು ಪ್ರಕಾರ ಶಿಕ್ಷೆ ಕೊಡುತ್ತೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!