15 ವರ್ಷ ಪೂರೈಸಿದ ಎಲ್ಲ ಸರ್ಕಾರಿ ವಾಹನಗಳು ಗುಜರಿಗೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದಲ್ಲಿ 15 ವರ್ಷ ಪೂರೈಸಿದ ಸರ್ಕಾರಿ ಎಲ್ಲಾ ವಾಹನಗಳನ್ನು ಗುಜರಿ(ಸ್ಕ್ರ್ಯಾಪ್) ಹಾಕಲಾಗುವುದು ಮತ್ತು ಆ ನಿಟ್ಟಿನಲ್ಲಿ ಸ್ಕ್ರ್ಯಾಪ್ ನೀತಿಯನ್ನು ರಾಜ್ಯಗಳಿಗೂ ಕಳುಹಿಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಹೇಳಿದ್ದಾರೆ.

ನಾಗಪುರದಲ್ಲಿ ವಾರ್ಷಿಕ ಕೃಷಿ-ವಿಷನ್, ಕೃಷಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಗಡ್ಕರಿ, ನಿನ್ನೆ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ 15 ವರ್ಷ ಪೂರೈಸಿರುವ ಕೇಂದ್ರ ಸರ್ಕಾರ ಎಲ್ಲ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಕಡತಕ್ಕೆ ಸಹಿ ಮಾಡಿದ್ದೇನೆ. ಕೇಂದ್ರ ಸರ್ಕಾರ ಈ ನೀತಿಯನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಿದ್ದೇನೆ. ಅವರು ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಪಾಣಿಪತ್​ನಲ್ಲಿ ಇಂಡಿಯನ್ ಆಯಿಲ್​ನ ಎರಡು ಘಟಕಗಳನ್ನು ತೆರೆಯಲಾಗಿದ್ದು, ಈ ಪೈಕಿ ಒಂದು ಘಟಕ ಪ್ರತಿ ದಿನ ಒಂದು ಲಕ್ಷ ಲೀಟರ್ ಎಥೆನಾಲ್ ಉತ್ಪಾದಿಸಲಿದೆ. ಮತ್ತೊಂದು ಘಟಕವು 150 ಟನ್ ಜೈವಿಕ ಡಾಂಬರು ಉತ್ಪಾದಿಸಲಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ. ಭತ್ತ ಬೆಳೆಯುವ ಈ ಪ್ರದೇಶಗಳಲ್ಲಿ ಭತ್ತದ ಹುಲ್ಲು ಸುಡುವಿಕೆಯಿಂದ ಮಾಲಿನ್ಯ ಉಂಟಾಗುತ್ತಿತ್ತು. ಇನ್ನು ಭತ್ತದ ಹುಲ್ಲಿನಿಂದ ಎಥೆನಾಲ್ ಹಾಗೂ ಜೈವಿಕ ಡಾಂಬರು ಉತ್ಪಾದನೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ನಮಗೆ 80 ಲಕ್ಷ ಟನ್ ಜೈವಿಕ ಡಾಂಬರು ಬೇಕಾಗಿದೆ. ಈ ಪೈಕಿ ಹೆಚ್ಚಿನದ್ದು ರಸ್ತೆ ಇಲಾಖೆಗೆ ಬೇಕಾಗಿದೆ. 50 ಲಕ್ಷ ಟನ್ ದೇಶದಲ್ಲೇ ಉತ್ಪಾದನೆಯಾಗುತ್ತಿದ್ದು, 25 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನು ಕೆಲವು ಸಮಯದ ಬಳಿಕ ದೇಶವು ಡಾಂಬರು ಆಮದು ನಿಲ್ಲಿಸಬಹುದು. ನಮಗೆ ಬೇಕಾದಷ್ಟು ಡಾಂಬರು ದೇಶದಲ್ಲೇ ಉತ್ಪಾದನೆಯಾಗಲಿದೆ. ನಮ್ಮ ರೈತರಿಂದ ದೊರೆಯುವ ಭತ್ತದ ಹುಲ್ಲಿನಿಂದಲೇ ನಮ್ಮ ಗ್ರಾಮಗಳು, ಜಿಲ್ಲೆಗಳು ಹಾಗೂ ರಾಜ್ಯಗಳ ರಸ್ತೆಗೆ ಡಾಂಬರು ದೊರೆಯಲಿದೆ ಎಂದು ಅವರು ಹೇಳಿದ್ದಾರೆ. ಇಂಡಿಯನ್ ಆಯಿಲ್​ ಅಸ್ಸಾಂನಲ್ಲಿ ಬಯೊಎಥೆನಾಲ್ ಉತ್ಪಾದನಾ ಘಟಕ ಆರಂಭಿಸಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!