ಹಾವೇರಿ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ

ಹೊಸದಿಗಂತ ವರದಿ, ಹಾವೇರಿ

ಜಿಲ್ಲೆಯಲ್ಲಿ ಯಾವುದೇ ಹೊಸ ಕೋವಿಡ್ ಪ್ರಕರಣಗಳು ಕಂಡುಬಂದಿಲ್ಲ. ಆದರೂ ಸಾರ್ವಜನಿಕರು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಕೊಳ್ಳಬೇಕು. ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಕೋವಿಡ್ ಮಾರ್ಗಸೂಚಿಗಳ ಪಾಲನೆಗೆ ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.೩ ರಿಂದ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದಿಲ್ಲ ಆದರೂ ಚಳಿಗಾಲ ಇರುವುದರಿಂದ ಎಲ್ಲರೂ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್, ಶುಚಿತ್ವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಮುನ್ನಚ್ಚರಿಕೆ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಡಿ.೩ ರಿಂದ ಯಾವುದೇ ಹೊಸ ಪ್ರಕರಣ ಇಲ್ಲ. ಡಿ.೭ ರಂದು ಹಳೆ ಪ್ರಕರಣಗಳನ್ನು ಡಿಸ್‌ಚಾರ್ಜ್ ಮಾಡಲಾಗಿದೆ. ಇದೇ ಕೊನೆಯ ಕೋವಿಡ್ ಪ್ರಕರಣ. ಅಂದಿನಿಂದ ಯಾವುದೇ ಕೋವಿಡ್ ಸಕ್ರಿಯ ಪ್ರಕರಣಗಳು ಕಂಡುಬಂದಿಲ್ಲ. ಸದ್ಯ ಜಿಲ್ಲೆಯಲ್ಲಿ ಹೆದರುವ ಪರಿಸ್ಥಿತಿ ಇಲ್ಲ. ಕೋವಿಡ್ ನಿರ್ವಹಣೆಗೆ ಜಿಲ್ಲೆಯಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮೂರು ನಮ್ಮ ಕ್ಲಿನಿಕ್ ಮತ್ತು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ೮೬ ಆರೋಗ್ಯ ಕೇಂದ್ರಗಳಿವೆ. ೭೩೭ ಆಕ್ಸಿಜನ್ ಬೆಡ್‌ಗಳು, ೭೧ ಐಸಿಯು ಬೆಡ್, ೬೭ ವೆಂಟಿಲೇಟರ್, ೧೨೩ ಚಿಕ್ಕ ಮಕ್ಕಳ ಬೆಡ್, ೧೭ ಎನ್.ಐ.ಸಿ.ಯು ಹಾಗೂ ಪಿಐಸಿಯು ೧೮ ಬೆಡ್‌ಗಳಿದ್ದು, ಪ್ರತಿ ತಾಲೂಕಿಗೆ ೨೦ ಹಾಸಿಗೆಗಳನ್ನು ಕೋವಿಡ್ ಪ್ರಕರಣಗಳಿಗೆ ಕಾಯ್ದಿರಿಸಲಾಗಿದೆ. ೭೯ ವೆಂಟಿಲೇಟರ್, ಪಿಎಸ್‌ಎ ಪ್ಲಾಂಟ್ಸ್ ೧೪, ಎಲ್ಲ ತಾಲೂಕುಗಳಲ್ಲಿ ೧೨ ಸಿಸಿಸಿ ಗುರುತಿಸಲಾಗಿದೆ. ಆಕ್ಸಿಜನ್ ಸಿಲಿಂಡರ್-೭೫೧, ಜಿಲ್ಲಾ ಆಸ್ಪತ್ರೆಯಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್-೧ (೬ ಕೆಎಲ್), ಆಮ್ಲಜನಕ ಸಾಂದ್ರಕಗಳು-೫೨೭ ಇರುತ್ತವೆ ಎಂದು ಹೇಳಿದರು.
ಆರ್.ಟಿ.ಪಿ.ಸಿ.ಆರ್ ೧೫೦ ಹಾಗೂ ಆರ್.ಎ.ಟಿ ೪೫ ಪರೀಕ್ಷೆ ಗುರಿ ನೀಡಲಾಗಿದೆ. ವಿ.ಟಿ.ಎಂ ೪೭ ಸಾವಿರ ಮತ್ತು ೪೨ ಸಾವಿರ ಆರ್‌ಎಟಿ ಕಿಟ್ ದಾಸ್ತಾನು ಲಭ್ಯವಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ಸಿಬ್ಬಂದಿಗಳು ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ೮೦ ಬೂಸ್ಟರ್ ಡೋಸ್ ವ್ಯಾಕ್ಷಿನೇಷನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
>> ಶೇ.೧೬ರಷ್ಟು
ಜಿಲ್ಲೆಯಲ್ಲಿ ಶೇ.೧೬ ರಷ್ಟು ಜನರು ಕೋವಿಡ್ ಬೂಸ್ಟರ್ ಡೋಸ್ ಪಡೆದಿದ್ದಾರೆ. ರಾಜ್ಯದ ಪ್ರಮಾಣ ಶೇ.೧೭ರಷ್ಟಿದೆ. ೬೦ ವರ್ಷ ಮೇಲ್ಪಟ್ಟ ಶೇ.೪೦ ರಷ್ಟು ಜನರಿಗೆ ಬೂಸ್ಟ್‌ರ್ ಡೋಸ್ ನೀಡಲಾಗಿದೆ. ಜಿಲ್ಲೆಯಲ್ಲಿ ೧೩,೨೪,೧೯೧ ಜನರಿಗೆ ಮೊದಲ ಡೋಸ್, ೧೩,೩೫,೫೦೮ ಜನರಿಗೆ ಎರಡನೇ ಡೋಸ್ ಹಾಗೂ ೧,೯೯,೫೧೬ ಜನರಿಗೆ ಬೋಸ್ಟರ್ ಡೋಸ್ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸಿಇಓ ಮಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!