ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾ ಓಬಿಸಿ ಮೋರ್ಚಾ ಪದಾಧಿಕಾರಿಗಳ ಪಾತ್ರ ಬಹಳ ಮುಖ್ಯವಾದುದು: ಅಶೋಕ ಮೂರ್ತಿ

ಹೊಸದಿಗಂತ ವರದಿ, ಹಾವೇರಿ

ಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಓಬಿಸಿ ಮೋರ್ಚಾದ ಪಾತ್ರ ಪ್ರಮುಖವಾಗಿದ್ದು ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನೀವುಗಳು ಪ್ರಮಾಣಿಕವಾಗಿ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷ ಅಶೋಕ ಮೂರ್ತಿ ಹೇಳಿದರು.
ಸೋಮವಾರ ನಗರದ ಬಿಜೆಪಿ ಜಿಲ್ಲಾ ನೂತನ ಕಾರ್ಯಾಲಯದಲ್ಲಿ ಜಿಲ್ಲಾ ಓಬಿಸಿ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಬೂತ್ ಮಟ್ಟದಲ್ಲಿ ಪ್ರತಿಯೊಬ್ಬ ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಅನೇಕ ಜನ ಪರ ಯೋಜನೆಗಳನ್ನು ಮನೆ ಮನೆಗೆ ತಿಳಿಸಬೇಕು ಎಂದರು.
ಓಬಿಸಿ ವರ್ಗದವರಿಗೆ ಅನೇಕ ಹಾಸ್ಟಲ್‌ಗಳನ್ನು ತೆರೆದು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದೆ, ಹೆಣ್ಣು ಮಕ್ಕಳ ಆತ್ಮರಕ್ಷಣೆಗಾಗಿ ಓಬವ್ವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಇದರಿಂದ ಹೆಣ್ಣು ಮಕ್ಕಳು ತಮ್ಮ ರಕ್ಷಣೆ ಮಾಡಿಕೊಳ್ಳಲು ಅನುಕುಲವಾಗಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಜ.೨ ರಿಂದ ೧೨ ವರಿಗೆ ಜಿಲ್ಲೆಯಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಜಿಲ್ಲೆ ಯಿಂದ ೫ ಜನ ಕಾರ್ಯಕರ್ತರು ತಂಡ, ಮಂಡಲ ದಿಂದ ೫ ಜನ ಕಾರ್ಯಕರ್ತರ ತಂಡವನ್ನು ರಚನೆ ಮಾಡಲಾಗಿದ್ದು ಅವರು ಆಯಾ ಮಂಡಲದ ಬೂತ್‌ಗಳಲ್ಲಿ ಸಂಚರಿಸಿ ಬೂತ್ ಸಮಿತಿ, ಪೇಜ ಸಮೀತಿ, ಪಂಚರತ್ನಾ ಪರಿಷ್ಕರಣೆ ಮಾಡುವಂತ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು ಈ ಒಂದು ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗದ ಪದಾಧಿಕಾರಿಗಳು ಮುತವರ್ಜಿ ವಹಿಸಿ ಕೆಲಸವನ್ನು ಮಾಡಬೇಕು. ರಾಜ್ಯದಿಂದ ಮತ್ತು ಜಿಲ್ಲೆಯಿಂದ ಯಾವುದೇ ಕೆಲಸವನ್ನು ಓಬಿಸಿ ಮೋರ್ಚಾಕ್ಕೆ ಕೊಟ್ಟಿದ್ದನ್ನು ತಕ್ಷಣ ಮಾಡುವುದರ ಮೂಲಕ ರಾಜ್ಯದಲ್ಲಿ ಹಾವೇರಿ ಜಿಲ್ಲಾ ಓಬಿಸಿ ಮೋರ್ಚಾ ಮುಂಚೂಣಿಯಲ್ಲಿ ಇದೆ ಎಂದರು.
ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ನೀಲಪ್ಪ ಚಾವಡಿ ಮಾತನಾಡಿ, ಪಕ್ಷ ನಮ್ಮನ್ನು ಗುರುತಿಸಿ ಜವಾಬ್ದಾರಿ ಸ್ಥಾನವನ್ನು ನೀಡಿದೆ ನಾವುಗಳು ಜವಾಬ್ದಾರಿಯನ್ನು ತೆಗೆದುಕೊಂಡವರು ಪಕ್ಷಕ್ಕೆ ನಿಷ್ಟಾವಂತರಾಗಿ ಕೆಲಸವನ್ನು ಮಾಡಬೇಕಾಗಿದೆ. ಓಬಿಸಿ ಮೋರ್ಚಾ ವತಿಯಿಂದ ೧೪೭೧ ಬೂತ್‌ಗಳಿಗೆ ಸಂಚರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋನೆಗಳ ಕರಪತ್ರವನ್ನು ಮನೆ ಮನೆಗೆ ತಲುಪಿಸುವುದು. ಬೂತ್‌ಗಳಲ್ಲಿ ಓಬಿಸಿ ತಂಡಗಳನ್ನು ಮಾಡಿ, ವಾಟ್ಸಪ್ ಗ್ರೂಫ್ ರಚನೆ ಮಾಡುವುದು. ಮುಂಬರುವ ಚುನಾವಣೆಗೆ ಓಬಿಸಿ ಮೋರ್ಚಾ ಎಲ್ಲಾ ರೀತಿಯಿಂದ ಸಿದ್ದಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಓಬಿಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಮತ್ತು ಹಾವೇರಿ ಪ್ರಭಾರಿ ರಾಜೇಂದ್ರ ನಾಯಕ, ರಾಜ್ಯ ಓಬಿಸಿ ಮೋರ್ಚಾ ಕಾರ್ಯಕಾರಣಿ ಸದಸ್ಯೆ ಕೆ.ಆರ್.ಜೈಶೀಲಾ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹುಲಗೂರ, ಶಿಗ್ಗಾಂವ ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಡಪದ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಧರ ಹೊಸಳ್ಳಿ ಹಾಗೂ ರುದ್ರೇಶ ಚಿನ್ನಣ್ಣನವರ, ಓಬಿಸಿ ಮೋರ್ಚಾ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು, ಓಬಿಸಿ ಮೋರ್ಚಾ ಸಂಯೋಜಕರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!