ಯೋಗದ ಮೊರೆ ಹೋದವರಿಗೆ ಎಲ್ಲ ಸಮಸ್ಯೆಗಳ ಪರಿಹಾರ ಸಿಕ್ಕಿದೆ: ಡಾ.ಎಚ್.ಎ. ಶಶಿರೇಖಾ

ಹೊಸದಿಗಂತ ವರದಿ ಮೈಸೂರು :

ಮೈಸೂರಿನಲ್ಲಿ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ನಡೆದಿದ್ದು, ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಚ್.ಎ. ಶಶಿರೇಖಾ ಯೋಗದ ಮಹತ್ವದ ಬಗ್ಗೆ ಮಾತನಾಡಿದ್ದಾರೆ.

ದೈನಂದಿನ ಜೀವನದಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಾಮಾಜಿಕ ಆರೋಗ್ಯ ಸುಸ್ಥಿರತೆಗೆ ಯೋಗ ಅಡಿಪಾಯವಾಗಿದೆ. ಯೋಗದ ಮೊರೆ ಹೋದವರು ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿದ್ದಾರೆ ಎಂದರು.

ಮೈಸೂರು ಅರಸರ ಕೊಡುಗೆ ದೊಡ್ಡದು:
ಯೋಗಗುರು ಡಾ.ಗಣೇಶ್ ಕುಮಾರ್ ಮಾತನಾಡಿ, ಮೈಸೂರು ಅರಸರು ಯೋಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಆ ಪರಂಪರೆಯನ್ನು ನಾವು ಮತ್ತಷ್ಟು ಹೆಚ್ಚಿಸಬೇಕಿದೆ. ಒಲಿಂಪಿಕ್ಸ್‌ನಲ್ಲಿ ಯೋಗವನ್ನು ಒಂದು ಕ್ರೀಡೆಯಾಗಿ ಸೇರ್ಪಡೆ ಮಾಡಲಾಗಿದೆ. ಇದರ ಜತೆಗೆ 2036ಕ್ಕೆ ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಇದರಲ್ಲಿ ನಮ್ಮ ಯೋಗ ಪಟುಗಳು ಪಾಲ್ಗೊಂಡು ದೇಶದ ಕೀರ್ತಿ ಹೆಚ್ಚಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಿದೆ ಎಂದು ಸಲಹೆ ನೀಡಿದರು. ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಶ್ರೀಹರಿ ಮಾತನಾಡಿ, ಬಲಿಷ್ಠ ಭಾರತಕ್ಕಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದರು.

ಅಪರಾಧಿಗಳಿಗೂ ಯೋಗಭಾಗ್ಯ:
ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್ ಮಾತನಾಡಿ, ಕೋಪ ತಾಪದಿಂದ ನಾನಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕೈದಿಗಳು ಜೈಲಿನಲ್ಲಿ ಬಂಧಿಯಾಗಿದ್ದಾರೆ. ನಮ್ಮಲ್ಲಿ ಅಂಥವರಿಗೆ ನಿತ್ಯ ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಇದರಿಂದ ಅವರಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ನಿಟ್ಟಿನಲ್ಲಿ ಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ತಿಳಿಸಿದರು.

ಗಣೇಶ್ ಕುಮಾರ್, ಶಶಿರೇಖಾಗೆ ಗುರುವಂದನೆ:
ಯೋಗಗುರು ಡಾ.ಗಣೇಶ್ ಕುಮಾರ್ ಹಾಗೂ ಡಾ.ಎಚ್.ಎ.ಶಶಿರೇಖಾ ಅವರಿಗೆ ಶಿಷ್ಯರಿಂದ ಗುರುವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ವೆಂಕಟೇಶ, ಮೈಸೂರು ಯೋಗ ಒಕ್ಕೂಟದ ಗೌರವಾಧ್ಯಕ್ಷ ಡಾ.ಚಂದ್ರಶೇಖರ್, ಅಧ್ಯಕ್ಷ ಟಿ.ಜಲೇಂದ್ರ ಕುಮಾರ್, ಯೋಗ ಫೆಡರೇಷನ್ ಆಫ್ ಮೈಸೂರಿನ ಕಾರ್ಯದರ್ಶಿ ಶಶಿಕುಮಾರ್, ಯೋಗ ಸ್ಪೋರ್ಟ್ಸ್ ಫೌಂಡೇಷನ್ ಖಜಾಂಚಿ ಎಂ.ಎನ್.ಮೋಹನ್, ರಾಜ್ಯ ಅಮೆಚೂರ್ ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಎ.ನಟರಾಜು, ಬಸವಮಾರ್ಗ ಸಂಸ್ಥೆಯ ಎಸ್.ರಾಜು, ಯೋಗ ಗುರುಗಳಾದ ಗೀತಾ ಕುಮಾರ್, ಪ್ರೇಮ್ ಕುಮಾರ್ ಇತರರು ಇದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!