ವಯಸ್ಸು ತಿರುಚಿದ ಆರೋಪ: ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶದ ನಂ.1 ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ವಿರುದ್ಧ ತನ್ನ ವಯಸ್ಸನ್ನ ತಿರುಚಿದ ಆರೋಪದಡಿ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಅವರ ಅಕಾಡೆಮಿ (ಪ್ರಕಾಶ್ ಪಡುಕೋಣೆ ಅಕಾಡೆಮಿ) ತರಬೇತುದಾರ ವಿಮಲ್ ಕುಮಾರ್, ತಂದೆ ಧೀರೇಂದ್ರ ಸೇನ್, ತಾಯಿ ನಿರ್ಮಲಾ ಮತ್ತು ಸಹೋದರ ಚಿರಾಗ್ ಅವರ ಹೆಸರನ್ನು ಎಫ್‌ಐಆರ್ ನಲ್ಲಿ ಹೆಸರಿಸಲಾಗಿದೆ.

ಈ ವರ್ಷ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಲಕ್ಷ್ಯ ಸೇನ್ ಚಿನ್ನದ ಪದಕ ಗೆದ್ದರು. ನವೆಂಬರ್ 30ರಂದು ರಾಷ್ಟ್ರಪತಿ ಭವನದಲ್ಲಿ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿ ನಡೆಸುತ್ತಿರುವ ನಾಗರಾಜ ಎಂ.ಜಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸ ಲಾಗಿದ್ದು, 2010ರಲ್ಲಿ ಲಕ್ಷ್ಯ ಅವರ ತರಬೇತುದಾರ ಮತ್ತು ಅವರ ಪೋಷಕರು ನಕಲಿ ಜನನ ಪ್ರಮಾಣ ಪತ್ರಗಳನ್ನ ಸೃಷ್ಟಿಸಿದ್ದರು ಎಂದು ನಾಗರಾಜ ದೂರಿನಲ್ಲಿ ತಿಳಿಸಿದ್ದಾರೆ. ಜನನ ಪ್ರಮಾಣಪತ್ರದ ಪ್ರಕಾರ, ಲಕ್ಷ್ಯ ಸೇನ್ 2001 ರಲ್ಲಿ ಜನಿಸಿದರೆ, ನಾಗರಾಜ ಅವರು 1998 ರಲ್ಲಿ ಜನಿಸಿದರು ಎಂದು ಹೇಳುತ್ತಾರೆ. ಈ ಪ್ರಕರಣದಲ್ಲಿ ಐಪಿಸಿಯ ಸೆಕ್ಷನ್ 420 (ವಂಚನೆ), 468 (ಫೋರ್ಜರಿ) ಮತ್ತು 471 (ನಕಲಿ ದಾಖಲೆಗಳು) ಸೇರಿವೆ. ಪೊಲೀಸರು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಕೋಚ್ ವಿಮಲ್ ಕುಮಾರ್ ಈ ಆರೋಪವನ್ನ ನಿರಾಕರಿಸಿದ್ದಾರೆ. ‘ದೂರುದಾರರು ಏನು ಆರೋಪ ಮಾಡಿದ್ದಾರೆಂದು ನನಗೆ ತಿಳಿದಿಲ್ಲ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. 2010ರಲ್ಲಿ ಲಕ್ಷ್ಯ ನನ್ನ ಅಕಾಡೆಮಿಗೆ ಬಂದರು ಮತ್ತು ನಾನು ಇತರ ಮಕ್ಕಳಂತೆ ಅವ್ರಿಗೂ ತರಬೇತಿ ನೀಡಿದ್ದೇನೆ’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!