ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಭೂ ಒತ್ತುವರಿ ಆರೋಪ ಹಿನ್ನೆಲೆ ಬಿಡದಿಯ ಕೇತಗಾನಹಳ್ಳಿಯಲ್ಲಿ ಎರಡನೇ ದಿನವೂ ಸರ್ವೇ (Survey) ಕಾರ್ಯ ಮುಂದುವರಿದಿದೆ.
ಇಂದು ಬಿಡದಿಯ ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ತೋಟವನ್ನು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಮಾಡಿದ್ದಾರೆ.
ಕುಮಾರಸ್ವಾಮಿ ತೋಟ ಹಾಗೂ ಸುತ್ತಮುತ್ತಲಿನ ಜಮೀನುಗಳನ್ನೂ ಸರ್ವೇ ಮಾಡಲಾಗಿದೆ. ಆಧುನಿಕ ಸರ್ವೇ ಉಪಕರಣಗಳ ಮೂಲಕ ಸರ್ವೇ ಕಾರ್ಯ ನಡೆಸಿ ಜಮೀನಿನ ಮೂಲ ಮಾಲೀಕರನ್ನೂ ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಗಿದೆ.
ಕಂದಾಯ ಇಲಾಖೆ ಅಧಿಕಾರಿಗಳ ಸರ್ವೆ ಕಾರ್ಯಕ್ಕೆ ಜಮೀನಿನ ಮೂಲ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ. ಸರಿಯಾದ ರೀತಿಯಲ್ಲಿ ಸರ್ವೇ ಮಾಡುತ್ತಿಲ್ಲ. ಬೇಕಾಬಿಟ್ಟಿ ಸರ್ವೆ ಮಾಡುತ್ತಿದ್ದಾರೆ. ನೋಟಿಸ್ ಕೊಟ್ಟು ಮೂಲ ಮಾಲೀಕರನ್ನು ಸ್ಥಳಕ್ಕೆ ಕರೆಸಿದ್ದಾರೆ. ಆದರೆ ಕುಮಾರಸ್ವಾಮಿ ಅವರ ತೋಟದ ಒಳಗೆ ಸರ್ವೇ ಮಾಡುವಾಗ ನಮ್ಮನ್ನು ಒಳಗೆ ಬಿಟ್ಟಿಲ್ಲ ಎಂದು ಸರ್ವೇ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.