ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಂಬ ಸಹಿತ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಗೈದಿದ್ದಾರೆ.
ತ್ರಿವೇಣಿ ಸಂಗಮದ ಪವಿತ್ರ ಗಂಗೆಯಲ್ಲಿ ಮುಳುಗೇಳುತ್ತಾ ತೀರ್ಥಸ್ನಾನ ಮಾಡಿದ ಸಚಿವರು, ಮಂತ್ರ ಪಠಣದೊಂದಿಗೆ ದೇವರಿಗೆ ನಮಸ್ಕರಿಸಿ, ಲೋಕದ ಸುಭಿಕ್ಷೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕುಟುಂಬ ಸಮೇತರಾಗಿ ವಿಶಿಷ್ಠ ಭಂಗಿಯ ಭಗವಾನ್ ಹನುಮ ದೇವಾಲಯ ಹಾಗೂ ಅಕ್ಷಯವತ್‌ಗೆ ತೆರಳಿ ದೇವರ ದರುಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಸಚಿವರೊಂದಿಗೆ ಪತ್ನಿ ಜ್ಯೋತಿ ಜೋಶಿ, ಮಕ್ಕಳಾದ ಅರ್ಪಿತಾ ಜೋಶಿ, ಅನನ್ಯಾ ಜೋಶಿ, ಅನುಷಾ ಜೋಶಿ ಹಾಗೂ ಸಹೋದರ ಗೋವಿಂದ ಜೋಶಿ-ಕಮಲಾ ಜೋಶಿ ದಂಪತಿ ಸೇರಿದಂತೆ ಮಕ್ಕಳು, ಮೊಮ್ಮಕ್ಕಳಾದಿಯಾಗಿ ಕುಟುಂಬದ ಸದಸ್ಯರೆಲ್ಲರೂ ಪುಣ್ಯಸ್ನಾನ ಗೈದು ಭಕ್ತಿ ಸಮರ್ಪಿಸಿದರು.
ಈ ವೇಳೆ ಪ್ರಯಾಗರಾಜ್‌ನಲ್ಲಿ ಮಾಧ್ಯಮಗಳೊಂದಿಗೆ ಮಹಾಕುಂಭದ ಅನನ್ಯ ಅನುಭವವನ್ನು ಹಂಚಿಕೊಂಡ ಜೋಶಿ, ಪ್ರಯಾಗ್‌ರಾಜ್ ಮಹಾ ಕುಂಭಮೇಳ ಹಿಂದು ಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆಯಾಗಿ ಯಶಸ್ವಿಯಾಗಿ ಜರಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತ್ರಿವೇಣಿ ಸಂಗಮದಲ್ಲಿ ಇಂದು ಕುಟುಂಬ ಸಹಿತ ಪಾಲ್ಗೊಂಡು ಪವಿತ್ರ ಸ್ನಾನ ಮಾಡುವ ಸುವರ್ಣ ಅವಕಾಶ ಲಭ್ಯವಾಗಿದ್ದು ನಮ್ಮ ಪುಣ್ಯ. ಇದು ನಮಗೆ ಅತ್ಯಂತ ಮಹತ್ವದ ಮತ್ತು ಭಕ್ತಿ ಸಮರ್ಪಣೆಯ ದೈವಿಕ ಕ್ಷಣವಾಗಿದೆ ಎಂದು ಖುಷಿಪಟ್ಟರು.
ಮಹಾಕುಂಭ ಒಂದು ಶ್ರೇಷ್ಠ ಆಧ್ಯಾತ್ಮಿಕ ಅನುಭವ ನೀಡುತ್ತದೆ. ಇಲ್ಲಿ ಪವಿತ್ರ ಸ್ನಾನ ಮಾಡುವುದು ಭವ್ಯವಾದ ಯಶಸ್ಸು, ನಂಬಿಕೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ ಎಂದು ತಮ್ಮ ಅನನ್ಯ ಅನುಭವವನ್ನು ಹಂಚಿಕೊಂಡರು.