ಗಣಿ ಕಂಪನಿಗಳ ಖಾಸಗಿಕರಣ ಆರೋಪ: ವಿಪಕ್ಷಗಳಿಗೆ ಸದನದಲ್ಲೇ ತಿರುಗೇಟುಕೊಟ್ಟ ಸಚಿವ ಜೋಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಲೋಕಸಭೆಯ ಕಲಾಪದಲ್ಲಿ ಇಂದು ಸಾರ್ವಜನಿಕ ಕಲ್ಲಿದ್ದಲು ಗಣಿ ಕಂಪನಿಗಳ ಖಾಸಗಿಕರಣ ಕುರಿತ ವಿಪಕ್ಷಗಳ ಆರೋಪಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.

ವಾಣಿಜ್ಯ ಕಲ್ಲಿದ್ದಲು ಬ್ಲಾಕ್ಸ್ ಗಳ ಹರಾಜು ಪ್ರಕ್ರಿಯೆ ಅತ್ಯಂತ ಪಾರದರ್ಶಕತೆಯಿಂದ ನಡೆಯುತ್ತಿದ್ದು, ಕಲ್ಲಿದ್ದಲು ಹಗರಣ ನಡೆಸಿದವರು ಈ ವ್ಯವಸ್ಥೆಯನ್ನ ವಿರೋಧಿಸುತ್ತಿದ್ದಾರೆ ಎಂದು ಪ್ರತ್ಯುತ್ತರ ನೀಡಿದ್ದಾರೆ.

SCCL ಕಲ್ಲಿದ್ದಲು ಗಣಿ ಕಂಪನಿಯನ್ನ ಕೇಂದ್ರ ಸರ್ಕಾರ ಖಾಸಗಿಕರಣ ಮಾಡಲು ಹೊರಟಿದೆ ಎಂದು ಲೋಕಸಭೆಯಲ್ಲಿ ಇಂದು ತೆಲಂಗಾಣ ಸಂಸದ ಉತ್ತಮ್ ರೆಡ್ಡಿ ಗದ್ದಲ ಎಬ್ಬಿಸಿದ್ದರು. ಇದಕ್ಕೆ ಸಂಸತ್ತಿನಲ್ಲಿ ಉತ್ತರಿಸಿದ ಕಲ್ಲಿದ್ದಲು ಸಚಿವ ಜೋಶಿ, SCCL ಖಾಸಗಿಕರಣ ಮಾಡುವ ಯಾವ ಪ್ರಸ್ತಾವನೆಯೂ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

6 ನೇ ಹಂತದ ಕಲ್ಲಿದ್ದಲು ಗಣಿಗಳನ್ನ ಖಾಸಗಿಯವರಿಗೆ ಹರಾಜು ನಡೆಸುತ್ತಿರುವ ವಿಚಾರಕ್ಕೂ, SCCL ಕಂಪನಿ ಖಾಸಗಿಕರಣಕ್ಕೂ ಸಂಬಂಧವಿಲ್ಲ. ಕಲ್ಲಿದ್ದಲು ಗಣಿಗಳನ್ನ ಖಾಸಗಿಯವರಿಗೆ ಹರಾಜು ಮಾಡಲಾಗ್ತಿದೆ ಅನ್ನೋದನ್ನ ಮುಂದಿಟ್ಟುಕೊಂಡು SCCL ಸರ್ಕಾರಿ ಉದ್ಯಮವನ್ನು ಖಾಸಗಿಕರಣ ಮಾಡ್ತಿದ್ದಾರೆ ಅಂತಾ ಆರೋಪಿಸುವುದು ಸರಿಯಲ್ಲ.SCCL ಕಂಪನಿಯಲ್ಲಿ ತೆಲಂಗಾಣ ಸರ್ಕಾರ ಶೇ 51% ರಷ್ಟು ಪಾಲುದಾರಿಕೆ ಹೊಂದಿದ್ದು ಕೇಂದ್ರ ಸರ್ಕಾರ ಶೇ 49 % ರಷ್ಟು ಶೇರ್ ಹೊಂದಿದೆ. ಹೀಗಿರುವಾಗ ತೆಲಂಗಾಣ ಸರ್ಕಾರವನ್ನು ಬಿಟ್ಟು ಕೇಂದ್ರ ಸರ್ಕಾರ ಮಾತ್ರ ಎಸ್.ಸಿ.ಸಿ.ಎಲ್ ಖಾಸಗಿಕರಣ ಮಾಡಲು ಹೇಗೆ ಸಾಧ್ಯ? ಅಂತ ಜೋಶಿ ಪ್ರಶ್ನಿಸಿದರು.

ಕಲ್ಲಿದ್ದಲು ಗಣಿಗಳ ಖಾಸಗಿ ಹರಾಜು ಪ್ರಾರಂಭವಾದಾಗಿನಿಂದ ಯಾರೂ ಕೂಡ ಆಕ್ಷೇಪಣೆಗಳನ್ನು ಎತ್ತಿಲ್ಲ. ಕೇಂದ್ರ ಸರ್ಕಾರವು ಪಾರದರ್ಶಕ ಹರಾಜು ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ರಾಜ್ಯಗಳಿಗೂ ಇದು ಪ್ರಯೋಜನಕಾರಿಯಾಗಿದೆ. ಹರಾಜಿನ ಮೂಲಕ ಸಂಪೂರ್ಣ ಆದಾಯವು ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ. ರಾಜ್ಯಗಳು ಬಯಸಿದರೆ, ಅವರು ಭಾಗವಹಿಸಬಹುದು. ಹರಾಜಿಗೆ ಹಲವು ರಾಜ್ಯ ಸರ್ಕಾರಗಳು ಸಹಕಾರ ನೀಡುತ್ತಿವೆ. ಛತ್ತೀಸ್‌ಗಢ, ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇಲ್ಲದಿದ್ದರೂ ಸಹ ಹರಾಜನ್ನು ಅಳವಡಿಸಿಕೊಂಡಿವೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!