ಬದಿಯಡ್ಕದ ವೈದರದ್ದು ಆತ್ಮಹತ್ಯೆಯೇ?: ಉಡುಪಿ ಪೊಲೀಸರಿಗೆ ಸಿಕ್ಕಿತು ಮಹತ್ವದ ಸಾಕ್ಷಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾಸರಗೋಡಿನ ಬದಿಯಡ್ಕದ ವೈದ್ಯ ಡಾ. ಕೃಷ್ಣಮೂರ್ತಿಯವರ ಶವ ಕುಂದಾಪುರ ರೈಲ್ವೇ ಟ್ರಾಕ್ ನಲ್ಲಿ ಪತ್ತೆಯಾಗಿದ್ದರ ಕುರಿತಾಗಿ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆಯವರ ನೇತೃತ್ವದಲ್ಲಿ ಕುಂದಾಪುರ ಪೋಲಿಸರು ನಡೆಸಿದ ತನಿಖೆಯಲ್ಲಿ ಬಹುತೇಕ ಆತ್ಮಹತ್ಯೆ ಎಂದು ಖಚಿತವಾಗಿದೆ ಎಂಬುದು ಪೋಲಿಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ನವೆಂಬರ್‌ 8 ಮಧ್ಯಾಹ್ನ ಸುಮಾರು 12.30 ಕ್ಕೆ ಮಂಗಳೂರು ಕೆ.ಎಸ್.ಆರ್.ಟಿ.ಸಿ ನಿಲ್ದಾಣದಿಂದ ಏಕಾಂಗಿಯಾಗಿ ಕುಂದಾಪುರಕ್ಕೆ ಪಯಣ ಬೆಳೆಸಿದ ವೈದರು, ಕುಂದಾಪುರ ಕೆ.ಎಸ್.ಆರ್.ಟಿ.ಸಿ ನಿಲ್ದಾಣದ ಶಾಸ್ತ್ರಿ ಸರ್ಕಲ್ ಗೆ ಆಗಮಿಸಿದ್ದಾರೆ. ಅಲ್ಲಿಂದ ಕುಂದಾಪುರದ ದ್ವಾರಕ ಹೋಟೆಲಿಗೆ ತೆರಳಿದ್ದ ವೈದ್ಯರು, ಸಂಜೆ 6 ರವರೆಗೆ ಕುಂದಾಪುರ ವಿವಿಧೆಡೆ ತೆರಳಿದ ಸಿಸಿಟಿವಿ ದೃಶ್ಯಗಳು ಪೋಲಿಸರಿಗೆ ದೊರಕಿದೆ ಎನ್ನಲಾಗಿದೆ.

ಮಂಗಳೂರಿನಿಂದ ವೈದ್ಯರು ಹಾಕಿಕೊಂಡು ಬಂದಿರುವ ಅಂಗಿಯೂ, ನ. 9 ರಂದು ಮೃತದೇಹ ಪತ್ತೆಯಾದಾಗ ದೊರಕಿದ ಅಂಗಿಗೆ ಹೋಲಿಕೆ ಇಲ್ಲ. ಅವರು ಅಂಗಿಯನ್ನು ಬದಲಾಯಿಸಿ ಆತ್ಮಹತ್ಯೆ ಮಾಡಿಕೊಂಡರೇ ಎಂಬುದರ ಕುರಿತಾಗಿ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ವೈದ್ಯರ ಜೊತೆಗೆ ಬ್ಯಾಗ್ ಒಂದು ಪತ್ತೆಯಾಗಿತ್ತು. ಆದರೆ ಮೃತದೇಹದ ಬಳಿ ಬ್ಯಾಗ್ ದೊರಕಿಲ್ಲ. ವಾಚ್ ಮತ್ತು ಬೆಲ್ಟ್ ಪ್ರತ್ಯೇಕವಾಗಿ ದೊರಕಿದ್ದು, ವೈದ್ಯರೇ ಇದನ್ನು ತೆಗೆದಿಟ್ಟಿದ್ದರೇ ಎಂಬುದು ಖಚಿತಗೊಂಡಿಲ್ಲ. ವೈದ್ಯರು ಹಾಕಿಕೊಂಡು ಬಂದಿರುವ ಅಂಗಿಯೂ ನಾಪತ್ತೆಯಾಗಿದ್ದು, ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.

ವೈದರ ಮೃತದೇಹದ ಮರಣೋತ್ತರ ಪರೀಕ್ಷೆಯೂ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಡೆದಿದ್ದು, ಅಂತಿಮ ವರದಿ ಇನ್ನಷ್ಟೇ ಸಿಗಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!