ದೇವಾಲಯದಲ್ಲಿ ಕಳ್ಳತನ ಆರೋಪ: ಹಿಂದೂ ಜಾಗರಣಾ ವೇದಿಕೆಯಿಂದ ಪ್ರತಿಭಟನೆ

ಹೊಸ ದಿಗಂತ ವರದಿ,ಮಡಿಕೇರಿ:

ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾ.ಪಂ ವ್ಯಾಪ್ತಿಯ ಕೊಳಗದಾಳು ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳತನ ಮತ್ತು ದೇವರ ಮೀನನ್ನು ಕೊಂದು ಹಿಂದೂಗಳ ಭಾವನೆಗೆ ಧಕ್ಕೆ ತಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಹಿಂದೂ ದೇವಾಲಯಗಳ ಕಳ್ಳತನ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಉಂಟು ಮಾಡುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದ ಪ್ರತಿಭಟನಾಕಾರರು ಆಗ್ರಹಿಸಿದರು.
ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಹಾಗೂ ಗ್ರಾ.ಪಂ ಪಿಡಿಒ ಗೆ ಮನವಿ ಪತ್ರ ಸಲ್ಲಿಸಿದ ವೇದಿಕೆಯ ಪ್ರಮುಖರು, ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು.
ನಕಲಿ ಕೀ ಬಳಸಿ ದೇವಾಲಯದ ಕಾಣಿಕೆ ಹುಂಡಿಯ ಹಣವನ್ನು ಕಳವು ಮಾಡಲಾಗಿದೆ. ಮಾತ್ರವಲ್ಲದೇ, ದೇವಾಲಯದ ಮುಂಭಾಗದ ನದಿಯಲ್ಲಿನ ದೈವಶಕ್ತಿಯ ಹಿನ್ನೆಲೆಯ, ಭಕ್ತರ ನಂಬಿಕೆಯ ಮೀನುಗಳನ್ನು ಕೊಲ್ಲಲಾಗಿದೆ. ಆ ಮೂಲಕ ಹಿಂದೂ ಭಕ್ತರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಲಾಗಿದೆ. ಆರೋಪಿಗಳು ಎಸ್‍ಡಿಪಿಐ ಕಾರ್ಯಕರ್ತರಾಗಿದ್ದಾರೆ. ದೇಶಾದ್ಯಂತ ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಎರಡು ಸಂಘಟನೆಗಳ ಮೇಲೆ ವಿಶೇಷ ನಿಗಾ ಇಡುವ ಮೂಲಕ ಶಾಂತಿ ಕದಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವೇದಿಕೆಯ ಪ್ರಾಂತ ಪ್ರಮುಖ ಗಣರಾಜ್ ಭಟ್ ಮಾತನಾಡಿ, ಹಿಂದೂಗಳ ಧಾರ್ಮಿಕ ನಂಬಿಕೆಗೆ ಚ್ಯುತಿ ಉಂಟು ಮಾಡಿದವರಿಗೆ ನಾವು ನಂಬಿದ ದೈವಶಕ್ತಿಯಿಂದಲೇ ಶಿಕ್ಷೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾಜ ಘಾತುಕ ಶಕ್ತಿಗಳ ವಿರುದ್ಧ ಪ್ರತಿಯೊಬ್ಬ ಹಿಂದೂ ಜಾಗೃತನಾಗಬೇಕು ಮತ್ತು ಜನಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸಂಯೋಜಕ್ ಕುಕ್ಕೇರ ಅಜಿತ್, ಮಡಿಕೇರಿ ತಾಲೂಕು ಸಂಯೋಜಕ ಎಂ.ಬೆಳ್ಯಪ್ಪ, ಬಿಜೆಪಿ ಪ್ರಮುಖ ಸುಮನ್, ಅಶೋಕ್, ಕವನ್, ಪಾಕ ದೇವಾಲಯ ಸಮಿತಿಯ ಕಿಶೋರ್ ಮನೋಹರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!