ಮುರುಘಾ ಶರಣರ ಮೇಲೆ ಬಂದಿರುವ ಆರೋಪ ಷಡ್ಯಂತ್ರದಿಂದ ಕೂಡಿದೆ: ಚಂದ್ರಶೇಖರ ಶಿವಾಚಾರ್ಯ

ಹೊಸದಿಗಂತ ವರದಿ, ವಿಜಯಪುರ

ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ಮೇಲೆ ಬಂದಿರುವ ಆಪಾದನೆ ಷಡ್ಯಂತ್ರದಿಂದ ಕೂಡಿದ್ದು, ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯವನ್ನು ಹೊರತೆಗೆಯಬೇಕು ಎಂದು ಜಿಲ್ಲಾ ಸ್ವಾಮೀಜಿಗಳ ಒಕ್ಕೂಟದಿಂದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ನೈತಿಕ ಬೆಂಬಲವನ್ನು ನೀಡುತ್ತವೆ ಎಂದು ಆಲಮೇಲದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.

ನಗರದಲ್ಲಿ ಮಂಗಳವಾರ ಜಿಲ್ಲಾ ಸ್ವಾಮೀಜಿಗಳ ಒಕ್ಕೂಟ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುರುಘಾ ಶರಣರು ತನಿಖೆಯನ್ನು ಎದುರಿಸಿ ಆರೋಪ ಮುಕ್ತವಾಗಿ ಹೊರಬರಲಿದ್ದಾರೆ. ಶರಣರು ಬಾಲಕಿಯರನ್ನು ಗಮನದಲ್ಲಿಟ್ಟುಕೊಂಡೆ ತನಿಖೆಯನ್ನು ಎದುರಿಸಲಿದ್ದಾರೆ. ತನಿಖೆಯಲ್ಲಿ ಅವರು ತಪ್ಪಿತಸ್ಥರಾದರೆ ಕಾನೂನಿನ ರೀತಿಯಲ್ಲಿ ಅವರಿಗೆ ಶಿಕ್ಷೆ ಆಗಲಿ ಎಂದು ಹೇಳಿದರು.

ಬಂತನಾಳದ ವೃಷಭಲಿಂಗ ಮಹಾಸ್ವಾಮೀಜಿ ಮಾತನಾಡಿ, ಮುರುಘಾ ಶರಣರ ವಿರುದ್ಧ ಷಡ್ಯಂತ್ರ ನಡೆದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಆಡಳಿತಾತ್ಮಕ ವಿಚಾರವಾಗಿ ನಡೆದಿರುವ ಷಡ್ಯಂತ್ರ. ಈ ಹಿಂದಿನಿಂದಲೂ ಸ್ವಾಮೀಜಿಗಳ ಮೇಲೆ ಈ ರೀತಿಯ ಆಪಾದನೆಗಳನ್ನು ಮಾಡಲಾಗುತ್ತಿದೆ ಎಂದು ಸ್ವತಃ ಮುರುಘಾ ಶರಣರೇ ಹೇಳಿದ್ದಾರೆ. ದುರುದ್ದೇಶದಿಂದ ಕೂಡಿರುವ ಈ ಷಡ್ಯಂತರದಿಂದ ಸ್ವಾಮೀಜಿಗಳು ಆರೋಪ ಮುಕ್ತವಾಗಿ ಹೊರಬರಲಿದ್ದಾರೆ ಎಂದರು.

ಒಂದು ವೇಳೆ ಆರೋಪ ಸಾಬೀತು ಆದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಾರೆ. ಪ್ರತಿ ಪೀಠಗಳು ತಮ್ಮದೇ ಆದ ಭಕ್ತ ಸಮೂಹ ಹೊಂದಿದೆ. ಆರೋಪ ಸಾಬೀತು ಆದರೆ ಪೀಠ ತ್ಯಾಗದ ಬಗ್ಗೆ ಅವರ ಭಕ್ತ ಸಮೂಹ ನಿರ್ಣಯ ತೆಗೆದುಕೊಳ್ಳುತ್ತದೆ. ಆ ವಿಚಾರ ಮಠದ ಸಮುದಾಯಕ್ಕೆ ಬಿಟ್ಟದ್ದು, ಪೀಠ ತ್ಯಾಗದ ಬಗ್ಗೆ ನಾವು ಮಾತನಾಡುವುದಿಲ್ಲ ಎಂದರು.

ಮುರುಘಾ ಶರಣರು ಸಾಕಷ್ಟು ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಎಲ್ಲ ಧರ್ಮದವರನ್ನು ಸ್ವಾಮೀಜಿಗಳು ಸಮಾನವಾಗಿ ಕಂಡಿದ್ದಾರೆ. ಅಂತವರ ಮೇಲೆ ಷಡ್ಯಂತ್ರ ನಡೆಸಿ, ಅವರನ್ನು ಕಳಂಕಿತರನ್ನಾಗಿ ಮಾಡಲು ಹೊರಟಿರುವ ವ್ಯಕ್ತಿಗಳ ಆಸೆ ಈಡೇರುವುದಿಲ್ಲ ಎಂದರು.

ಚಡಚಣದ ಷಡಕ್ಷರಿ ಮಹಾಸ್ವಾಮೀಜಿ, ಸಿಂದಗಿಯ ಡಾ. ಪ್ರಭುಲಿಂಗ ಮಹಾಸ್ವಾಮೀಜಿ, ನಾಗಠಾಣದ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ, ಮಸಬಿನಾಳದ ಡಾ. ಸಿದ್ದರಾಮ ಸ್ವಾಮಿಗಳು, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ರೇವಣಸಿದ್ದ ಶಿವಾಚಾರ್ಯರು, ಅರ್ಜುಣಗಿ ಸಂಗನಬಸವ ಶಿವಾಚಾರ್ಯರು, ತಡವಲಗಾ ರಾಚೋಟೇಶ್ವರ ಶಿವಾಚಾರ್ಯರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪಿರ ವಾಲಿಕಾರ ಸುದ್ದಿಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!