November 8, 2026
Sunday, November 8, 2026
spot_img

ಬಿಸ್ಕತ್‌ನಲ್ಲಿ ಪಶು ಆಹಾರದ ಹೊಟ್ಟು, ಹಾಲಿನಲ್ಲಿ ಕಲಬೆರಕೆ: ಫೇಮಸ್ ಕಂಪನಿಗಳ ವಿರುದ್ಧ FSSAI ಕ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆರೋಪದಡಿ ಪ್ರಿಯಾಗೋಲ್ಡ್‌ ಬಿಸ್ಕತ್‌ ತಯಾರಕ ಸೂರ್ಯ ಫುಡ್‌ ಆ್ಯಂಡ್‌ ಆಗ್ರೋ ಲಿಮಿಟೆಡ್‌, ದೊಡ್ಲ ಡೈರಿ ಹಾಗೂ ಯುಇಐಆರ್ ಆರ್ಗ್ಯಾನಿಕ್ ಫುಡ್ಸ್‌ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪ್ರಾಸಿಕ್ಯೂಷನ್‌ ಪ್ರಕ್ರಿಯೆ ಆರಂಭಿಸಿದೆ. ಇತರ ಕೆಲವು ಆಹಾರ ಸಂಸ್ಥೆಗಳಿಗೂ ಸ್ವಚ್ಛತೆ ಮತ್ತು ನಿಯಮ ಪಾಲನೆಗೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿದೆ.

ದೊಡ್ಲ ಹಾಲಿನಲ್ಲಿ ಲೋಪದ ಆರೋಪ

ದೊಡ್ಲ ಡೈರಿಯ ಫುಲ್‌ ಕ್ರೀಮ್‌ ಹಾಲಿನ ಮಾದರಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಹಾಲಿನ ಕೊಬ್ಬಿನ ಅಂಶ ಪತ್ತೆಯಾಗಿದೆ ಎಂದು ಮೊದಲ ಹಂತದ ಪರೀಕ್ಷೆಯಲ್ಲಿ ತಿಳಿದುಬಂದಿತ್ತು. ಮೇಲ್ಮನವಿ ಬಳಿಕ ನಡೆದ ಮರುಪರಿಶೀಲನೆಯ ಮಾದರಿಯಲ್ಲಿ ಡಿಟರ್ಜೆಂಟ್‌ ಅಥವಾ ಕಾಸ್ಟಿಕ್‌ ಸೋಡಾ ಇರುವುದರ ಜೊತೆಗೆ ಕೊಬ್ಬಿನ ಅಂಶವೂ ನಿಗದಿತ ಮಟ್ಟಕ್ಕಿಂತ ಕಡಿಮೆ ಇದೆ ಎಂದು ರೆಫರಲ್‌ ಪ್ರಯೋಗಾಲಯ ವರದಿ ನೀಡಿದೆ ಎಂದು ಮೂಲ ವರದಿ ತಿಳಿಸಿದೆ.

ಇದನ್ನೂ ಓದಿ:

ಪ್ರಿಯಾಗೋಲ್ಡ್‌ ಬಿಸ್ಕತ್‌ ತಯಾರಿಕೆಯಲ್ಲಿ ಹೊಟ್ಟು ಬಳಕೆ?

ಸೂರ್ಯ ಫುಡ್‌ ಆ್ಯಂಡ್‌ ಆಗ್ರೋ ಸಂಸ್ಥೆಯ ಘಟಕದ ತಪಾಸಣೆ ವೇಳೆ, ಪಶು ಆಹಾರಕ್ಕೆ ಬಳಸುವ ಹೊಟ್ಟನ್ನು ಬಿಸ್ಕತ್‌ ತಯಾರಿಕೆಯಲ್ಲಿ ಫೈಬರ್‌ ಮೂಲವಾಗಿ ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಘಟಕದಲ್ಲಿ ಸ್ವಚ್ಛತೆ, ಕೀಟ ನಿಯಂತ್ರಣ, ಕಚ್ಚಾ ವಸ್ತುಗಳ ಸಂಗ್ರಹಣೆ ಮತ್ತು ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆಗೆ ಸಂಬಂಧಿಸಿದ ಲೋಪಗಳೂ ಕಂಡುಬಂದಿವೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಪರವಾನಗಿಯನ್ನು ಅಮಾನತುಗೊಳಿಸಿ ಪ್ರಾಸಿಕ್ಯೂಷನ್‌ ಕ್ರಮಕ್ಕೆ ಅನುಮತಿ ನೀಡಲಾಗಿದೆ.

ಸಾವಯವ ಒಣದ್ರಾಕ್ಷಿಯಲ್ಲೂ ಕೀಟನಾಶಕ

ಯುಇಐಆರ್ ಆರ್ಗ್ಯಾನಿಕ್ ಫುಡ್ಸ್‌ನ ಸಾವಯವ ಹಳದಿ ಒಣದ್ರಾಕ್ಷಿಯ ಮಾದರಿಯಲ್ಲಿ ಅನುಮತಿತ ಮಿತಿಗಿಂತ ಹೆಚ್ಚಿನ ಕೀಟನಾಶಕ ಅವಶೇಷಗಳು ಪತ್ತೆಯಾಗಿವೆ ಎಂದು ಪ್ರಯೋಗಾಲಯ ವರದಿ ತಿಳಿಸಿದೆ. ನರ್ಪಧಮ್ ಫುಡ್ಸ್‌ ಮತ್ತು ಸನ್‌ ರಿಡ್ಜಸ್‌ ಹೆಲ್ತ್‌ ಕೇರ್ಸ್‌ ಸೇರಿದಂತೆ ಇತರ ಸಂಸ್ಥೆಗಳಿಗೂ ವಿವಿಧ ಲೋಪಗಳ ಕುರಿತು ನೋಟಿಸ್‌ ನೀಡಲಾಗಿದೆ.

Must Read