October 17, 2026
Saturday, October 17, 2026
spot_img

ಭಾರತ–ಚೀನಾ ಮೇಲೆ ಸುಂಕಾಸ್ತ್ರ ಪ್ರಯೋಗಕ್ಕೆ ಅಮೆರಿಕ ಬ್ರೇಕ್: 100% ತೆರಿಗೆ ಆತಂಕದಿಂದ ತಾತ್ಕಾಲಿಕ ರಿಲೀಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಭಾರೀ ಸುಂಕ ವಿಧಿಸುವ ಅಮೆರಿಕದ ಯೋಜನೆಗೆ ಸದ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಸಂಬಂಧಿತ ರಫ್ತುಗಳ ವಿಚಾರದಲ್ಲಿ ಪ್ರಸ್ತಾಪಿಸಲಾಗಿದ್ದ ಹಲವು ನಿರ್ಬಂಧಗಳು ಮತ್ತು ಸುಂಕಗಳ ಜಾರಿಗೆ ವಿನಾಯಿತಿ ನೀಡಿದ್ದು, ಇದರಿಂದ ಭಾರತ ಮತ್ತು ಚೀನಾಗೆ ತಕ್ಷಣದ ಮಟ್ಟದಲ್ಲಿ ನಿರಾಳತೆ ಸಿಕ್ಕಿದೆ.

ಟ್ರಂಪ್ ತಮ್ಮ ಕಾರ್ಯಕಾರಿ ಆದೇಶದಲ್ಲಿ, ಈ ಸಮಯದಲ್ಲಿ ವಿನಾಯಿತಿ ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಈ ನಿರ್ಧಾರವನ್ನು ನಿರ್ಬಂಧಗಳ ಶಾಶ್ವತ ರದ್ದತಿ ಎಂದು ಪರಿಗಣಿಸುವಂತಿಲ್ಲ. ಸದ್ಯಕ್ಕೆ ಅವುಗಳ ಜಾರಿಗೆ ಮಾತ್ರ ತಡೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಮತ್ತೆ ಕ್ರಮ ಕೈಗೊಳ್ಳುವ ಅವಕಾಶ ಅಮೆರಿಕದ ಅಧ್ಯಕ್ಷರಿಗಿದೆ.

ಏನಿತ್ತು ಅಮೆರಿಕದ ಸುಂಕದ ಯೋಜನೆ?

ರಷ್ಯಾ–ಉಕ್ರೇನ್ ಯುದ್ಧಕ್ಕೆ ಹಣಕಾಸಿನ ನೆರವು ಸಿಗುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಅಮೆರಿಕದ ಹೊಸ ಕಾನೂನು ರೂಪಿಸಲಾಗಿತ್ತು. ಇದರ ಅಡಿಯಲ್ಲಿ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಪ್ರಮುಖ ದೇಶಗಳಾದ ಭಾರತ, ಚೀನಾ, ಸ್ಲೋವಾಕಿಯಾ, ಹಂಗೇರಿ ಮತ್ತು ಅಜರ್‌ಬೈಜಾನ್‌ಗಳಿಂದ ಅಮೆರಿಕಕ್ಕೆ ಬರುವ ಸರಕುಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸುವ ಅಧಿಕಾರ ಟ್ರಂಪ್‌ಗೆ ದೊರೆಯುತ್ತಿತ್ತು. ರಷ್ಯಾದ ಇಂಧನ ಉತ್ಪನ್ನಗಳ ಆಮದು ಮತ್ತು ಮಾಸ್ಕೋಗೆ ನೆರವು ನೀಡುವ ಸಂಸ್ಥೆಗಳ ಮೇಲೆಯೂ ಕಠಿಣ ಕ್ರಮಗಳ ಪ್ರಸ್ತಾಪವಿತ್ತು.

ಇದನ್ನೂ ಓದಿ:

ಭಾರತದ ವ್ಯಾಪಾರದ ಮೇಲೆ ಏನು ಪರಿಣಾಮ?

ಈ ಹೆಚ್ಚುವರಿ ಸುಂಕ ಜಾರಿಯಾಗಿದ್ದರೆ, ಅಮೆರಿಕಕ್ಕೆ ಭಾರತದ ರಫ್ತುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುವ ಸಾಧ್ಯತೆಯಿತ್ತು. ಈಗಿನ ತಾತ್ಕಾಲಿಕ ವಿನಾಯಿತಿ ಆ ಆತಂಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ. ಆದರೆ, ಭವಿಷ್ಯದಲ್ಲಿ ಸುಂಕ ಮತ್ತೆ ಜಾರಿಯಾದರೆ ಅದರ ಪರಿಣಾಮ ಯಾವ ವಲಯಗಳ ಮೇಲೆ ಎಷ್ಟಿರಲಿದೆ ಎಂಬುದು ಅಂತಿಮ ದರಗಳು ಮತ್ತು ನಿಯಮಗಳನ್ನು ಅವಲಂಬಿಸಿರುತ್ತದೆ.

ಭಾರತ ಈ ಹಿಂದೆ ತನ್ನ ಇಂಧನ ಭದ್ರತೆಯೇ ಪ್ರಮುಖ ಆದ್ಯತೆ ಎಂದು ಸ್ಪಷ್ಟಪಡಿಸಿತ್ತು. 140 ಕೋಟಿಗೂ ಅಧಿಕ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ಮೂಲಗಳಿಂದ ಇಂಧನ ಖರೀದಿಸುವುದನ್ನು ಮುಂದುವರಿಸುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿತ್ತು.

Must Read