ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಲಿಸ್ತಾನಿ ಉಗ್ರ ಗುರುಪತ್‍ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಸಿವಿಲ್ ಮೊಕದ್ದಮೆ ಹೂಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ ಕೋರ್ಟ್ ಭಾರತ ಸರ್ಕಾರಕ್ಕೆ ಸಮನ್ಸ್ ಜಾರಿ ಮಾಡಿದೆ.
ನ್ಯೂಯಾರ್ಕ್‍ನ ಸದರ್ನ್‌ನ ಜಿಲ್ಲಾ ನ್ಯಾಯಾಲಯದ ಸಮನ್ಸ್‌ನಲ್ಲಿ ಭಾರತ ಸರ್ಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಜಿ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮುಖ್ಯಸ್ಥ ಸಮಂತ್ ಗೋಯೆಲ್, ಏಜೆಂಟ್ ವಿಕ್ರಮ್ ಯಾದವ್ ಮತ್ತು ಭಾರತೀಯ ಉದ್ಯಮಿ ನಿಖಿಲ್ ಗುಪ್ತಾ ಅವರನ್ನು ಹೆಸರಿಸಿದ್ದು, 21 ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.
ಸಿಖ್ಸ್ ಫಾರ್ ಜಸ್ಟಿಸ್‍ನ ಮುಖ್ಯಸ್ಥ ಮತ್ತು ಅಮೆರಿಕ ಮತ್ತು ಕೆನಡಾದ ದ್ವಿ ಪೌರತ್ವವನ್ನು ಹೊಂದಿರುವ ಪನ್ನುನ್‍ನನು ಕೊಲ್ಲುವ ಸಂಚನ್ನು ಅಮೆರಿಕ ವಿಫಲಗೊಳಿಸಿದೆ ಎಂದು ನವೆಂಬರ್‌ನಲ್ಲಿ ಪತ್ರಿಕೆಯೊಂದು ವರದಿ ಮಾಡಿತ್ತು. ಬಳಿಕ ಅಮೆರಿಕದ ಅಧಿಕಾರಿಗಳು ಇದನ್ನು ದೃಢಪಡಿಸಿದ್ದರು.
ಇದರ ಬೆನ್ನಲ್ಲೇ, ಈ ವಿಚಾರವಾಗಿ ವಿದೇಶಾಂಗ ಸಚಿವಾಲಯ ಇದು ಕಳವಳಕಾರಿ ವಿಷಯ ಎಂದು ಹೇಳಿತ್ತು. ಅಲ್ಲದೇ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಅವರು ಭಾರತವು ಈ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿದೆ. ಆದರೆ ಇದು ಭಾರತ-ಅಮೆರಿಕದ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಒತ್ತಿ ಹೇಳಿದ್ದರು.