ಸ್ವಂತಕ್ಕೆ ಆಸರೆಯಿಲ್ಲದಿದ್ದರೂ ಇವರಿಗೆ ಹಸಿರೇ ಉಸಿರು : ಮಾಧವ ಉಳ್ಳಾಲರ ಲಕ್ಷ ವೃಕ್ಷ ಪ್ರೀತಿ

  • ಪ್ರಕಾಶ್ ಇಳಂತಿಲ

ಇವರು ಕಳೆದ 37ವರ್ಷಗಳಲ್ಲಿ ನೆಟ್ಟ ಗಿಡಗಳ ಸಂಖ್ಯೆ ಎರಡೂ ಕಾಲು ಲಕ್ಷಕ್ಕೂ ಅಧಿಕ (2,25,000 )!ಮೂರೂವರೆ ಲಕ್ಷಕ್ಕೂ ಅಧಿಕ ಗಿಡಗಳನ್ನು ವಿತರಿಸಿದ್ದಾರೆ ಎಂದರೆ ನಿಮಗೆ ಇವರ ಸಾಧನೆಯ ಅಗಾಧತೆ ಅರಿವಾಗಬಹುದು.ಒಂದು ಖಾಸಗಿ ಸಹಕಾರಿ ಸಂಸ್ಥೆಯಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದು, ತಮ್ಮ ಆದಾಯ (ದೊಡ್ಡ ಆದಾಯವೇನಲ್ಲ)ದ ಒಂದು ಭಾಗವನ್ನು ಗಿಡನೆಡಲು, ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸಲು ಬಳಸುವುದನ್ನು ಬದ್ಧತೆಯಾಗಿ ಮಾಡಿಕೊಂಡಿರುವ ಈ ವ್ಯಕ್ತಿಯ ನಿಸ್ಪೃಹ ಸಾಧನೆಯನ್ನು ಕಂಡರೆ , ಈ ಕಲಿಯುಗದಲ್ಲೂ ಹೀಗಿದ್ದವರು ಇದ್ದಾರೆಯೇ ಎನಿಸಿದರಿದು. ಈ ವಿನೀತ ಪ್ರಕೃತಿಸೇವಕನ ಹೆಸರೇ ಮಾಧವ ಉಳ್ಳಾಲ .
ಅವರ ಪ್ರಾಮಾಣಿಕ ಪರಿಸರ ಕಾಳಜಿ, ಬದ್ಧತೆ, ಅಪ್ರತಿಮ ಸಾಧನೆಗಳನ್ನು ತಿಳಿದದ್ದೇ ಆದರೆ ನೀವು ಅಚ್ಚರಿ ಪಡಲಿದ್ದೀರಿ. ಇಂತಹ ಸಾಧಕರಿಗೆ ಬೆನ್ನೆಲುಬಾಗಿ ಸರಕಾರ -ಸಮಾಜ -ವ್ಯವಸ್ಥೆಗಳು ನಿಂತರೆ ಪರಿಸರ ರಕ್ಷಣೆಯಲ್ಲಿ ನಾವು ಬಹುದೊಡ್ಡ ಸಾಧನೆ ಮಾಡಲು ಸಾಧ್ಯವಿದೆ.
ದ.ಕ.ಜಿಲ್ಲೆಗೆ ಕದಂಬ ವೃಕ್ಷ: ಮಾಧವ ಉಳ್ಳಾಲ ಅವರು ಕದಂಬ ವೃಕ್ಷಗಳನ್ನು ದೊಡ್ಡ ಪ್ರಮಾಣ(ಪೊಳಲಿಯ ಶ್ರೀರಾಮಕೃಷ್ಣ ತಪೋವನದ ಸ್ವಾಮೀಜಿಯವರ ಪ್ರೇರಣೆ)ದಲ್ಲಿ ಬೆಳೆಸಿದ್ದಾರೆ. ೧೧ವರ್ಷಗಳ ಹಿಂದೆ ದ.ಕ.ಜಿಲ್ಲೆಗೆ ಪ್ರಥಮ ಬಾರಿಗೆ ಕದಂಬ ವೃಕ್ಷವನ್ನು ಪರಿಚಯಿಸಿದವರು ಅವರು.ಏಕಕಾಲಕ್ಕೆ ೯೦೦ಗಿಡಗಳನ್ನು ತಂದು ಬೆಳೆಸಿದ್ದ ಅವರ ಬಗ್ಗೆ ಆಗಲೇ ದೇಶದ ನಂ.೧ ಆಂಗ್ಲ ಪತ್ರಿಕೆ ವಿಶೇಷ ಲೇಖನ ಪ್ರಕಟಿಸಿ ಗೌರವಿಸಿತ್ತು.ಲಯನ್ಸ್ ಇಂಟರ್‌ನ್ಯಾಷನಲ್‌ನ ಕೆ.ಸಿ.ಪ್ರಭುಗಳ ಸಹಕಾರ ಮತ್ತು ಇತರ ಸಂಘಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಈ ಕಾರ್ಯ ಮಾಡಿದ್ದ ಅವರು ಬಿಜೈ ವಿವೇಕಾನಂದ ಪಾರ್ಕ್, ಬೋಳೂರು ಶಾಲೆ, ಬೋಳಿಯಾರಿನ ಶ್ರೀ ಲಕ್ಷ್ಮೀ ನೃಸಿಂಹ ದೇವಾಲಯದ ಕುಂಟಾಲಗಿರಿ ಬೆಟ್ಟ ಮತ್ತಿತರ ಕಡೆಗಳಲ್ಲಿ ಬೆಳೆಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ರಾಜಭವನದಲ್ಲಿ ಕದಂಬ ಗಿಡ ನೆಟ್ಟ ಬಳಿಕ ಈ ವೃಕ್ಷದ ಬಗ್ಗೆ ವ್ಯಾಪಕ ಪ್ರಚಾರ, ಅರಿವು ಮೂಡುವಂತಾಯಿತು ಎನ್ನುತ್ತಾರೆ.
ಏನಿದು ಕದಂಬ ವೃಕ್ಷ?: ‘ಕದಂಬಬಾಹು’ ಎಂಬ ಪದವನ್ನು ಪುರಾಣದಲ್ಲಿ ಕೇಳಿದ್ದೇವೆ.ವೇದದಲ್ಲೂ ಉಲ್ಲೇಖ ಇರುವ ಈ ವೃಕ್ಷದ ಟೊಂಗೆಗಳು ಬಹುವಿಶಾಲವಾಗಿ (40-43ಅಡಿ ಉದ್ದಕ್ಕೆ )ಬೆಳೆಯುತ್ತವೆ. 600ರಿಂದ 150೦ವರ್ಷ ಬಾಳುವ ಮರಗಳಿವು. 100ಕ್ಕಿಂತ ಹೆಚ್ಚು ಗಿಡಗಳು ಒಂದೇ ಕಡೆ ಇದ್ದರೆ ಸಾಂಕ್ರಾಮಿಕ ರೋಗಗಳನ್ನು ತಡೆಯುತ್ತವಂತೆ !ಇದರ ಚಿಗುರು ವಿಕ್ಸ್‌ನ ಪರಿಮಳ ಹೊಂದಿದ್ದು, ಹಣೆಗೆ ಹಚ್ಚಿದರೆ ತಲೆನೋವನ್ನು ಶಮನಗೊಳಿಸುತ್ತದೆ.ಹಣ್ಣನ್ನು ತಿನ್ನುತ್ತಾರೆ.ಭಗವಾನ್ ಶ್ರೀಕೃಷ್ಣ ಕಾಳಿಂಗ ಮರ್ಧನ ನಡೆಸಿದ ಪ್ರಸಂಗದಲ್ಲೂ ಈ ವೃಕ್ಷದ ಉಲ್ಲೇಖವಿದೆ. ಪ.ಬಂ.ದ ಕಾಳಿ ನದಿಯ ಉಗಮ ಸ್ಥಳ ಇದರ ಮೂಲ…ವಿವರಿಸುತ್ತಾ ಹೋಗುತ್ತಾರೆ ಮಾಧವರು.
ಅಶೋಕ ವೃಕ್ಷವನ್ನೂ ಹೆಚ್ಚು ಬೆಳೆಸುವ ಅವರು , ಅಶೋಕ ವೃಕ್ಷ ಶೋಕನಿವಾರಕ. ಅದರ ಗಾಳಿ ಶ್ರೇಷ್ಠ. ಸೀತಾಮಾತೆ ಅಶೋಕವನದಲ್ಲಿದ್ದುದನ್ನು ಉಲ್ಲೇಖಿಸುತ್ತಾರೆ.ಅದರ ವೈಜ್ಞಾನಿಕ ಹೆಸರು, ಕುಟುಂಬ, ಔಷಧೀಯ ಗುಣಗಳ ಬಗೆಗೂ ಹೇಳು ತ್ತಾರೆ. ಅಳಿವಿನಂಚಿನಲ್ಲಿರುವ ಮರ ಇದಾಗಿದ್ದು, 18000ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ.
ಕಾಂಡ್ಲಾವನ ಹೆಚ್ಚಲಿ: ಸಮುದ್ರ ಕೊರೆತ , ನದಿ ಕೊರೆತಗಳನ್ನು ತಡೆಯುವಲ್ಲಿ ಕಾಂಡ್ಲಾವನ ಬೆಳೆಸುವ ಅಗತ್ಯವಿದೆ. ಈ ಬಗ್ಗೆ ನಮ್ಮ ಜಾಗೃತಿ ಏನೇನೂ ಸಾಲದು. ಹಿಂದೆ ಶಾಲೆಯೊಂದರ ಶಿಕ್ಷಕಿ ಮತ್ತು ನಾಲ್ವರು ಮಕ್ಕಳು ಪ್ರಾಜೆಕ್ಟ್ ಮಾಡಿದಾಗ ಅವರಿಗೆ ಒಂದು ಸರ್ಟಿಫಿಕೇಟ್ ಕೂಡಾ ನೀಡಲಾಗಿರಲಿಲ್ಲ. ಬಳಿಕ ಹೈದರಾಬಾದ್‌ನಲ್ಲಿ ನಡೆದ ಮ್ಯಾಂಗ್ರೋವ್ ಕುರಿತ ವಿಚಾರ ಸಂಕಿರಣದಲ್ಲಿ ಅವರ ಯೋಜನೆಯನ್ನು ಗುರುತಿಸಿ ಗೌರವಿಸಿದ್ದರು. ಅಂದರೆ ಇಲ್ಲಿ ತೀರ್ಪುಗಾರರಿಗೆ ಅದರ ಮಹತ್ವವೇ ಗೊತ್ತಾಗಲಿಲ್ಲ ಎಂದು ಖೇದ ವ್ಯಕ್ತಪಡಿಸುತ್ತಾರೆ.ಪ.ಬಂ.ದ ಮಧುಬನ್‌ನಲ್ಲಿ ಏಶ್ಯಾದಲ್ಲೇ ಅತಿದೊಡ್ಡ ಕಾಂಡ್ಲಾವನ ಇರುವುದನ್ನು ಬೊಟ್ಟು ಮಾಡುತ್ತಾರೆ.
ಈ ವೃಕ್ಷಪ್ರೇಮಿಯನ್ನು ಗುರುತಿಸಿದ ಅರಣ್ಯ ಇಲಾಖೆ : ಲಕ್ಷಾಂತರ ಗಿಡಗಳನ್ನು ನೀಡುವ ಮೂಲಕ ,ತನ್ನ ಗಿಡನೆಡುವ ಕಾಯಕಕ್ಕೆ ಅರಣ್ಯ ಇಲಾಖೆ , ಅದರಲ್ಲೂ ಜಿಲ್ಲಾ ಅರಣ್ಯಾಧಿಕಾರಿ ಶ್ರೀ ದಿನೇಶ್ ಕುಮಾರ್ (ಐಎಫ್‌ಎಸ್), ವಲಯ ಅರಣ್ಯಾಧಿಕಾರಿ ಶ್ರೀಪ್ರಶಾಂತ್ ಪೈಸೇರಿದಂತೆ ಸ್ಥಳೀಯ ಅಧಿಕಾರಿ ಮತ್ತು ಸಿಬ್ಬಂದಿ ತುಂಬು ಸಹಕಾರ ನೀಡಿದೆ ಎಂದು ಸ್ಮರಿಸಿಕೊಳ್ಳುವ ಅವರು, ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಬಲವನ್ನೂ ಉಲ್ಲೇಖಿಸುತ್ತಾರೆ. ಈ ವೃಕ್ಷಮಿತ್ರನಿಗೆ ರಾಜ್ಯ ಜೀವಿಶಾಸ್ತ್ರ ಇಲಾಖೆಯ ರಾಜ್ಯ ಪ್ರಶಸ್ತಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಸಂದಿವೆ.ಆದರೆ ಇವರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡಬೇಕಾದ ಸಾಧಕನಾಗಿದ್ದಾರೆ.
ಸ್ವಂತ ಹಣದಿಂದಲೇ ನೀರು !: ಮಾಧವರು ಕೇವಲ ಗಿಡಗಳನ್ನು ನೆಡುವುದಷ್ಟೇ ಅಲ್ಲ, ನೆಟ್ಟ ಗಿಡಗಳಿಗೆ ನೀರು ಹಾಕಿ ಪೋಷಿಸುವಲ್ಲಿ ಕೂಡಾ ಅಷ್ಟೇ ಕಾಳಜಿಯಿಂದ ಕೆಲಸ ಮಾಡುತ್ತಾರೆ. ಕೆಲವು ಸಂಘಸಂಸ್ಥೆಗಳು ಅವರಿಗೆ ನೆರವಾಗುತ್ತಿವೆ. ಇನ್ನು ಅನೇಕ ಕಡೆಗಳಲ್ಲಿ ಅವರು ತಮ್ಮ ಕೈಯಿಂದಲೇ ಖರ್ಚು ಮಾಡಿ ಸಾರ್ವಜನಿಕ ಪ್ರದೇಶಗಳಲ್ಲಿರುವ ಗಿಡಗಳಿಗೆ ನೀರುಣಿಸುವ ಕೆಲಸ ಮಾಡುತ್ತಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು.
ಜಾಗೃತಿ ಸಾಲದು: ಸರಕಾರ, ಅನೇಕ ಪರಿಸರ ಪ್ರೇಮಿಗಳು ಇಷ್ಟೆಲ್ಲ ಪ್ರಯತ್ನಿಸಿದರೂ ಜನರಲ್ಲಿ ಇನ್ನೂ ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಲ್ಲ, ಗಿಡಗಳನ್ನು ಬೆಳೆಸುವುದರಿಂದ ಆಗುವ ಲಾಭ , ಪ್ರಯೋಜನಗಳು ಗೊತ್ತಾಗುತ್ತಿಲ್ಲ. ಜನತೆ ಮುಂದಿನ ಪೀಳಿಗೆಯ ಭವಿಷ್ಯದ ಬಗೆಗೆ ಚಿಂತನೆ ಮಾಡುತ್ತಿಲ್ಲ ಎಂದು ಅವರು ವಿಷಾದದಿಂದ ಹೇಳುತ್ತಾರೆ.ಈಜಿಪ್ಟ್‌ನಲ್ಲಿ ಇತ್ತೀಚೆಗೆ ನಡೆದ ತಾಪಮಾನ ಕುರಿತ ಜಾಗತಿಕ ಸಮ್ಮೇಳನವನ್ನು ಉಲ್ಲೇಖಿಸುವ ಅವರು, ಸರಕಾರ ಸ್ಥಳೀಯ ಮಟ್ಟದಲ್ಲೂ ಇಂತಹ ಕಾರ್ಯಕ್ಕೆ ಆಸಕ್ತರನ್ನು ಬಳಸಿಕೊಳ್ಳಬೇಕು.ವ್ಯವಸ್ಥೆಯ ಭಾಗದಿಂದ ಬೆಂಬಲ ಲಭಿಸಿದರೆ ತನ್ನ ಕಾರ್ಯವನ್ನು ಇನ್ನಷ್ಟು ವಿಸ್ತರಿಸಲು ಸಿದ್ಧ ಎನ್ನುತ್ತಾರೆ.
ಎತ್ತರಕ್ಕೆ ಬೆಳೆಯುವ ಮರಗಳನ್ನು ನೆಡಬೇಕು.ಇಂಗಾಲವನ್ನು ಹೀರಿಕೊಳ್ಳುವ ಮತ್ತು ಹೆಚ್ಚು ಆಮ್ಲಜನಕ ಸೃಷ್ಟಿಸುವ ಮರಗಳನ್ನು ಹೆಚ್ಚೆ ಚ್ಚು ಬೆಳೆಸುವ ಅಗತ್ಯ ಇದೆ. ಇದರ ಜೊತೆ ಪ್ರಾಣಿಪಕ್ಷಗಳಿಗೆ ಆಹಾರ ಒದಗಿಸುವಲ್ಲಿ ಹಣ್ಣು ಬೆಳೆಯುವ ಮರಗಳನ್ನು ಅಧಿಕ ಪ್ರಮಾಣದಲ್ಲಿ ಬೆಳೆಸಿದರೆ ಕಾಡು ಪ್ರಾಣಿಗಳು ನಾಡಿಗೆ ಬಂದು ಹಾನಿ ಮಾಡುವುದನ್ನು ತಡೆಯಬಹುದೆನ್ನುತ್ತಾರೆ. ಮೋಡಗಳ ಸೃಷ್ಟಿ, ತಡೆಯುವಿಕೆ, ಮಳೆ ಸುರಿಯುವಿಕೆಯ ಸಮತೋಲನ, ತಾಪಮಾನ ತಗ್ಗಿಸುವಿಕೆ, ಮಾಲಿನ್ಯ ನಿಯಂತ್ರಣ, ವಾತಾವರಣ ಶುದ್ಧಿಗೆ ನೆರವಾಗುತ್ತದೆ ಎಂದು ತಮ್ಮ ಜ್ಞಾನದ ವಿಸ್ತಾರವನ್ನು ಹಂಚಿಕೊಳ್ಳುತ್ತಾರೆ.
ಸಾವಯವ ಕೃಷಿ ಬೇಕು: ರೈತರ ಆದಾಯ ಹೆಚ್ಚಿಸಲು ಸಾವಯವ ಕೃಷಿ ಅತ್ಯಂತ ಪ್ರಶಸ್ತ. ವಿಷಮುಕ್ತ ಮತ್ತು ಆರೋಗ್ಯಪೂರ್ಣ ಆಹಾರಕ್ಕಾಗಿ ಸಾವಯವ ಕೃಷಿ ಮಾಡಬೇಕು.ನಾನು ಈ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಮಾಡಲು ಸಿದ್ಧ. ಸಣ್ಣ ಜಾಗದಲ್ಲೂ ಸಾವಯವ ಕೃಷಿ ಮೂಲಕ ಹೆಚ್ಚಿನ ಉತ್ಪಾದನೆ ಮಾಡಲು ಸಾಧ್ಯ ಎಂಬುದನ್ನು ಮಾಡಿ ತೋರಿಸಿ ಕೊಡುವೆ ಎನ್ನುತ್ತಾರೆ.
ಸ್ವಂತಕ್ಕೆ ಸೂರಿಲ್ಲ…: ಮಾಧವ ಉಳ್ಳಾಲರು ಇಷ್ಟೆಲ್ಲ ಕೆಲಸ ಮಾಡುತ್ತಿದ್ದರೂ ಸ್ವಂತಕ್ಕೆಂದು ಸೂರಿಲ್ಲ. ಪತ್ನಿಯೊಂದಿಗೆ ಸಣ್ಣ ಬಾಡಿಗೆ ಮನೆಯಲ್ಲಿದ್ದಾರೆ. ಹಿರಿಯರ ಜಾಗದಲ್ಲಿ ಒಂದು ಮುರುಕಲು ಗುಡಿಸಲು ಇದೆ. ಅದಕ್ಕೂ ತಕರಾರು . ಅದನ್ನು ಉಳಿಸಿಕೊಳ್ಳಲು ಮಾಧವ ಉಳ್ಳಾಲ ಸಹೋದರರು ನಡೆಸುತ್ತಿರುವ ಕಾನೂನು ಹೋರಾಟದ್ದೇ ಒಂದು ವ್ಯಥೆಯ ಕಥೆ.ಆದರೇನು , ಇದಾವುದೂ ಅವರ ವೃಕ್ಷ ಪ್ರೀತಿಗೆ ತಡೆಯಾಗಿಲ್ಲ.ಆದರೂ ಮಾಧವರ ಕುಟುಂಬಕ್ಕೆ ಇಂತಹ ಅನ್ಯಾಯವಾಗುತ್ತಿರುವುದು ನಾಗರಿಕ ಸಮಾಜಕ್ಕೆ ಶೋಭೆಯೆನಿಸದು.
ಇದೀಗ ಪಿಗ್ಮಿ ಸಂಗ್ರಹ ಕಾರ್ಯವನ್ನು ಕೂಡಾ ಅರ್ಧದಿನಕ್ಕೆ ಇಳಿಸಿ, ಇನ್ನರ್ಧ ದಿನವನ್ನು ಪರಿಸರ ಚಟುವಟಿಕೆಗೆ ಮೀಸಲಾಗಿರಿಸಿರುವ ಈ ವಿಶಿಷ್ಟ ಸಾಧಕನ ಪರಿಸರ ಪ್ರೀತಿಗೆ ಶರಣು ಎನ್ನಲೇಬೇಕು. ಈ ನಿಸ್ವಾರ್ಥ ಕೆಲಸಕ್ಕೆ ಪ್ರೇರಣೆ ಏನೆಂದು ಕೇಳಿದರೆ, ಅಪ್ಪ-ಅಮ್ಮ ನೀಡಿದ ಸಂಸ್ಕಾರ , ಸಹೋದರರ , ಜನರ ಬೆಂಬಲ ಎನ್ನುತ್ತಾರೆ. ಇಂದು ಮಣ್ಣು, ಪ್ರಕೃತಿ ಉಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಕೆಲಸ ಮಾಡುತ್ತಿದ್ದಾರೆ.ಅವರ ಪ್ರಯತ್ನಗಳಿಗೆ ಜನತೆ ಸಾಥ್ ನೀಡಬೇಕು ಎಂದು ಕಳಕಳಿ ತೋರುತ್ತಾರೆ.ನಮ್ಮ ಮುಂದಿನ ಪೀಳಿಗೆಗಾಗಿ ನಾವು ಗಿಡ ನೆಡಬೇಕು ,ದೇವರ ಕಾಡುಗಳನ್ನು ಹೆಚ್ಚಿಸಬೇಕು.ಹಕ್ಕಿ, ದುಂಬಿ, ಚಿಟ್ಟೆ, ಕೀಟಗಳು ಪರಾಗಸ್ಪರ್ಶ ಮಾಡದಿದ್ದರೆ ನಾವು ಉಳಿಯಬಲ್ಲೆವೇ ? ಇದು ಅವರ ಪ್ರಶ್ನೆ. ಜೀವಸಂಕುಲದ ಜೀವನಚಕ್ರದ ಸುಲಲಿತ ಮುಂದುವರಿಕೆಗಾಗಿ ನಾವು ಈ ಕೆಲಸ ಮಾಡಬೇಕು ಎಂಬ ಅವರ ಚಿಂತನೆ ಅಸದೃಶವಾದುದು.ಇಂತಹವರ ಬೆನ್ನಿಗೆ ಸಮಾಜ -ಸರಕಾರ ನಿಲ್ಲಬೇಕು.

ಸಾವಯವ ಕೃಷಿ…

5 ವರ್ಷಗಳ ಹಿಂದೆ ಪರಿಸರ ಎಂದರೆ ಗಿಡ ನೆಡುವುದು, ಕಾಡು ಬೆಳೆಸುವುದು ಇವಿಷ್ಟೇ ಅವರ ಕಾರ್ಯವಾಗಿದ್ದರೆ, ಬಳಿಕ ಸಾವಯವ ಕೃಷಿಯ ಅಗತ್ಯವನ್ನೂ ಮನಗಂಡರು. ಭೂಮಿಗೆ ವಿಷವುಣಿಸಬಾರದು , ಜನರಿಗೆ ವಿಷಮುಕ್ತ ಆರೋಗ್ಯಕರ ಆಹಾರ ಲಭಿಸುವಂತಾಗಬೇಕು, ರಾಸಾಯನಿಕ ರಹಿತ ಕೃಷಿಯೊಂದಿಗೆ ಭೂಮಿಯನ್ನು ತಂಪಾಗಿಸಬೇಕು ಎಂದು ಯೋಚಿಸಿ ಆ ದಿಕ್ಕಿನಲ್ಲಿ ಕೆಲಸ ಆರಂಭಿಸಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಒಡ್ಡೂರು ಫಾರ್ಮ್ಸ್‌ನಲ್ಲಿ ಸಾವಯವ ತರಕಾರಿ ಕೃಷಿ ಪ್ರಯೋಗದಲ್ಲಿ ತನ್ನನ್ನು ತೊಡಗಿಸಿಕೊಂಡರು. ಕದ್ರಿ ಪಾರ್ಕ್‌ನಲ್ಲಿ ಅರ್ಧ ಎಕರೆಯಲ್ಲಿ ಸಾವಯವ ತರಕಾರಿ ಕೃಷಿ ಮಾಡಿ ತೋರಿಸಿದರು. ಆರ್ಥಿಕವಾಗಿ ಶ್ರೀಮಂತನಲ್ಲದಿದ್ದರೂ, ಶ್ರೀಮಂತ ಮನಸ್ಸಿನ ಮಾಧವರು ಸಂಘಸಂಸ್ಥೆಗಳನ್ನು ಬಳಸಿಕೊಂಡು ,ಸ್ಥಳೀಯರನ್ನು ಪ್ರೇರೇಪಿಸಿ ಗಿಡಮರಗಳ ಪರಿಚಯ, ಉಪಯೋಗ, ಎಲ್ಲಿ, ಏಕೆ, ಯಾವಾಗ ಬೆಳೆಯಬೇಕು ಎಂಬ ಅರಿವು ಮೂಡಿಸುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ. ಶ್ರೀಸೋಮೇಶ್ವರ ದೇಗುಲ, ಶ್ರೀಭಗವತಿ ಕ್ಷೇತ್ರ, ಶ್ರೀ ವ್ಯಾಘ್ರ ಚಾಮುಂಡಿ ಕ್ಷೇತ್ರ ಸೇರಿದಂತೆ 78 ಕ್ಕೂ ಅಧಿಕ ದೇಗುಲ, ದೈವಸ್ಥಾನ, ನಾಗವನಗಳಲ್ಲಿಸಾವಿರಾರು ಗಿಡಗಳನ್ನು ನೆಟ್ಟಿದ್ದಾರೆ. ಉಳ್ಳಾಲದ ದರ್ಗಾ ಆವರಣದಲ್ಲೂ ಅವರು ಗಿಡಗಳನ್ನು ನೆಟ್ಟಿರುವ ಅವರು, ಯುವಕ ಮಂಡಲ, ಜೇಸಿ, ಲಯನ್ಸ್, ರೋಟರಿ ಹೀಗೆ ಎಲ್ಲರ ಜೊತೆ ಸೇರಿ ತಮ್ಮ ಪರಿಸರ ಕಾಳಜಿಯನ್ನು ವ್ಯಕ್ತಗೊಳಿಸಿದ್ದಾರೆ. ಸ್ಮಶಾನಗಳನ್ನೂ ಹಸಿರಾಗಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!