ವೀಕೆಂಡ್ ಕರ್ಫ್ಯು ಇಲ್ಲವಾದರೂ ಗಿರಿಶ್ರೇಣಿಯ ನಿಸರ್ಗ ತಾಣಗಳು ಪ್ರವಾಸಿಗರಿಲ್ಲದೆ ಖಾಲಿ ಖಾಲಿ!

ಹೊಸದಿಗಂತ ವರದಿ,ಚಿಕ್ಕಮಗಳೂರು:

ಸರ್ಕಾರ ವೀಕ್‌ಎಂಡ್ ಕರ್ಫ್ಯುವನ್ನು ರದ್ದು ಪಡಿಸಿದ್ದರು ಜಿಲ್ಲೆಯ ಗಿರಿಶ್ರೇಣಿಯ ನಿಸರ್ಗ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳು ಶನಿವಾರ ಪ್ರವಾಸಿಗರಿಲ್ಲದೆ ಭಣಗುಟ್ಟಿದವು.
ಕರ್ಫ್ಯು ರದ್ದಾದ ಬೆನ್ನಲ್ಲೇ ಪ್ರವಾಸಿಗರ ದಂಡು ಮಲೆನಾಡಿನ ಪ್ರವಾಸಿ ತಾಣಗಳತ್ತ ದಾಂಗುಡಿ ಇಡುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ಗಿರಿ ತಪ್ಪಲಿನ ತಾಣಗಳಿಗೆ ಭೇಟಿ ನೀಡಿದರು.
ವಾರಾಂತ್ಯದ ಜೊತೆಗೆ ನಾಲ್ಕನೇ ಶನಿವಾರವಾದ ಕಾರಣಕ್ಕೆ ಸರ್ಕಾರಿ ರಜೆ ಇದ್ದರೂ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕ್ಷೀಣಿಸಿದ್ದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿತು.
ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ, ಹೊನ್ನಮ್ಮನ ಹಳ್ಳ, ಕೆಮ್ಮಣ್ಣುಗುಂಡಿ, ದಬೆ ದಬೆ ಫಾಲ್ಸ್‌ಗಳು ಸೇರಿದಂತೆ ಗಿರಿ ಪ್ರದೇಶದ ನಿಸರ್ಗತಾಣಗಳು ಜನರೇ ಇಲ್ಲದೆ ಬಣಗುಟ್ಟಿದವು.
ಕುಟುಂಬ ಸಮೇತ ಆಗಮಿಸುವ ಪ್ರವಾಸಿಗರು ಹಾಗೂ ಯುವ ಜೋಡಿಗಳ ಕಲರವದಿಂದ ಕೂಡಿರುತ್ತಿದ್ದ ಗಿರಿ, ಜಲಪಾತಗಳಲ್ಲಿ ಇಂದು ಜನರೇ ಇಲ್ಲದೇ ನೀರವ ಮೌನ ಆವರಿಸಿಕೊಂಡಿತ್ತು. ಖಾಲಿ ಪ್ರದೇಶಗಳಲ್ಲಿ ಸೊಂಯ್ಯನೆ ಬೀಸುವ ಗಾಳಿಯ ಸದ್ದು, ಅಲ್ಲೊಂದು ಇಲ್ಲೊಂದು ಹಕ್ಕಿ ಪಕ್ಷಿಗಳ ಚಿಲಿಪಿಲಿ ಕೇಳಿಸಿದ್ದು ಬಿಟ್ಟರೆ, ವಾಹನಗಳ ಭರಾಟೆ, ಹಾರನ್ ಸದ್ದಾಗಲಿ ಕೇಳಲಿಲ್ಲ.
ಪ್ರತಿ ವಾರಾಂತ್ಯದ ಎರಡುದಿನ ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಇಂದು ಆಗೊಂದು ಈಗೊಂದು ವಾಹನಗಳು ಸಂಚರಿಸಿದವು.
ಪ್ರವಾಸಿಗರಿಲ್ಲದ ಕಾರಣ ಗಿರಿ ಪ್ರದೇಶ ಸೇರಿದಂತೆ ಜಿಲ್ಲೆಯ ಬಹುತೇಕ ಹೋಂಸ್ಟೇಗಳು, ರೆಸಾರ್ಟ್‌ಗಳು ಖಾಲಿ ಉಳಿದಿದ್ದವು. ಕೆಲವೇ ಹೋಂಸ್ಟೇಗಳಿಗೆ ಮುಂಗಡ ಬುಕ್ಕಿಂಗ್ ಆಗಿದ್ದು ಬಿಟ್ಟರೆ ಉಳಿದಂತೆ ಪ್ರವಾಸಿಗರ ಆಗಮನಕ್ಕಾಗಿ ಕಾದು ಕುಳಿತುಕೊಳ್ಳಬೇಕಾದ ಸ್ಥಿತಿ ಉಂಟಾಗಿತ್ತು.
ಹೋಂಸ್ಟೇಗಳು, ರೆಸಾರ್ಟ್‌ಗಳು ವಾರಾಂತ್ಯದ ಪ್ರವಾಸಿಗರನ್ನೇ ನೆಚ್ಚಿಕೊಂಡು ನಡೆಸಲ್ಪಡುತ್ತಿವೆ. ಕಳೆದ ಎರಡು ವಾರ ವೀಕೆಂಡ್ ಕರ್ಫ್ಯು ಇದ್ದ ಕಾರಣ ಸಾಕಷ್ಟು ನಷ್ಟ ಉಂಟಾಗಿತ್ತು. ಈ ವಾರ ಸರ್ಕಾರ ಕರ್ಫ್ಯು ರದ್ದು ಪಡಿಸಿದ್ದರೂ ಪ್ರವಾಸಿಗರು ಬಾರದಿರುವುದರಿಂದ ಆದಾಯಕ್ಕೆ ಪೆಟ್ಟು ಬೀಳುವ ಜೊತೆಗೆ ಜೊತೆಗೆ ನಿರಾಸೆಯನ್ನೂ ಅನುಭವಿಸಬೇಕಾಗಿದೆ ಎಂದು ಹೋಂಸ್ಟೇ ಮಾಲೀಕರು ಬೇಸರ ವ್ಯಕ್ತಪಡಿಸಿದರು.
ಪ್ರವಾಸಿಗರು ಹೆಚ್ಚಬಹುದು ಎನ್ನುವ ನಿರೀಕ್ಷೆಯಲ್ಲಿ ಊಟ, ಉಪಹಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪ್ರವಾಸಿಗರೇ ಇಲ್ಲದೆ ಅದು ಪ್ರಯೋಜನಕ್ಕೆ ಬಾರದಾಗಿದೆ ಎಂದು ಹೋಂಸ್ಟೇ ಮಾಲೀಕ ಗಿರೀಶ್ ಹೇಳಿದರು.
ವೀಕೆಂಡ್ ಕರ್ಫು ರದ್ದಾಗುವ ವಿಚಾರದಲ್ಲಿ ಪ್ರವಾಸಗರು ಗೊಂದಲದಲ್ಲಿದ್ದ ಕಾರಣಕ್ಕೆ ಮುಂಚಿತವಾಗಿ ಪ್ರವಾಸದ ಯೋಜನೆಯನ್ನು ಹಾಕಿಕೊಳ್ಳದಿರುವುದು ಪ್ರವಾಸಿಗರ ಸಂಖ್ಯೆ ಕ್ಷೀಣಿಸಲು ಕಾರಣವಾಯಿತು. ಸರ್ಕಾರ ವಾರದ ಆರಂಭದಲ್ಲೇ ಕರ್ಫು ರದ್ದುಪಡಿಸುವ ನಿರ್ಧಾರವನ್ನು ಪ್ರಕಟಿಸಿದ್ದರೆ ಒಂದಷ್ಟು ಪ್ರವಾಸಿಗರು ಪ್ರವಾಸದ ಯೋಜನೆ ಹಾಕಿಕೊಳ್ಳುತ್ತಿದ್ದರು. ಕೊನೇ ಗಳಿಗೆಯಲ್ಲಿ ನಿರ್ಧಾರ ತೆಗೆದುಕೊಂಡ ಕಾರಣ ಪ್ರವಾಸಿಗರಿಲ್ಲದೆ ನಷ್ಟಕ್ಕೆ ಕಾರಣವಾಗಿದೆ ಎನ್ನುವ ಅಭಿಪ್ರಾಯ ಕೇಳಿಬಂತು.
ಪ್ರವಾಸಿಗರಿಲ್ಲದಿರುವುದು ನಷ್ಟಕ್ಕೆ ಕಾರಣವಾಯಿತು ಎನ್ನುವುದು ಹೋಂಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಉದ್ಯಮಿಗಳ ಅಳಲಾದರೆ, ಕೊರೋನಾ ಸೋಂಕಿನ ಪ್ರಕರಣಗಳು ಏರುಗತಿಯಲ್ಲಿರುವ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಇತರೆ ಹೊರಜಿಲ್ಲೆಗಳಿಂದ ಪ್ರವಾಸಿಗರು ಬಾರದಿರುವುದು ಸ್ವಾಗತಾರ್ಹ ಎಂದು ಚಿಕ್ಕಮಗಳೂರು ನಗರ ಹಾಗೂ ಗಿರಿ ಪ್ರದೇಶದ ಸ್ಥಳೀಯ ಜನರು ಹೇಳುತ್ತಿದ್ದಾರೆ.
ಬೆಂಗಳೂರು, ಮೈಸೂರು ಸೇರಿದಂತೆ ಹೊರ ರಾಜ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಾರೆ. ಆ ಜಿಲ್ಲೆಗಳಲ್ಲೇ ಕೊರೋನಾ ಸೋಂಕಿನ ಮಹಾ ಸ್ಫೋಟ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಬಾರದಿರುವುದು ಉತ್ತಮ ಬೆಳವಣಿಗೆ ಇದರಿಂದ ಇನ್ನೊಂದು ವಾರದ ವರೆಗೆ ಸುಧಾರಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ ಎನ್ನುವ ಮಾತುಗಳು ಕೇಳಿಬಂದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!