ಮೋದಿ ಭೇಟಿ ಮಾಡಿದ ಆಲ್ಟ್​​ಮ್ಯಾನ್: ಪ್ರಧಾನಿಯ ಉತ್ಸಾಹ ಕಂಡು ಖುಷಿಗೊಂಡ ChatGPT ರೂವಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚ್ಯಾಟ್​ಜಿಪಿಟಿ (ChatGPT) ರೂವಾರಿ ಸ್ಯಾಮ್ ಆಲ್ಟ್​ಮ್ಯಾನ್ ಭಾರತಕ್ಕೆ ಆಗಮಿಸಿದ್ದಾರೆ. ಜೂನ್ 8, ಗುರುವಾರ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಿ ಕೃತಕ ಬುದ್ಧಿಮತ್ತೆಯ ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಕಾನೂನು ಕಟ್ಟಳೆಗೆ ಒಳಪಡಿಸಲು ಭಾರತ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಓಪನ್​ಎಐ ಸಂಸ್ಥೆಯ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರು ಪ್ರಧಾನಿ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ಪ್ರಧಾನಿ ಅವರ ಉತ್ಸಾಹ ಕಂಡು ಖುಷಿ ಆಗಿತು ಎಂದು ಆಲ್ಟ್​ಮ್ಯಾನ್ ಹೇಳಿದರು.
‘ಅದು (ಭೇಟಿ) ನಿಜಕ್ಕೂ ಅಮೋಘವಾಗಿತ್ತು, ರಂಜನಾತ್ಮಕವಾಗಿತ್ತು. ಅವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ಹಾಗೂ ಅದರ ಅನುಕೂಲತೆಗಳ ಬಗ್ಗೆ ಬಹಳ ಯೋಚಿಸಿದ್ದರು. ಅವರಲ್ಲಿ ಬಹಳ ಉತ್ಸಾಹ ಕಂಡೆ. ಚಾಟ್​ಜಿಪಿಟಿಯನ್ನು ಭಾರತ ಇಷ್ಟು ಬೇಗ ಇಷ್ಟು ಮಟ್ಟದಲ್ಲಿ ಯಾಕೆ ಅಪ್ಪಿಕೊಂಡಿದೆ ಎಂದು ನಾವು ಅವರನ್ನು ಕೇಳಿದೆವು. ಅವರ ಮಾತು ಕೇಳಲು ಬಹಳ ಖುಷಿ ಎನಿಸಿತು. ನಮ್ಮ ಪ್ರಶ್ನೆಗಳಿಗೆ ಅವರಲ್ಲಿ ಒಳ್ಳೆಯ ಉತ್ತರಗಳಿದ್ದವು’ ಎಂದು ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಹೇಳಿದರು.

‘ನಾವು ಭಾರತದ ಮುಂದಿರುವ ಅವಕಾಶಗಳ ಬಗ್ಗೆ ಮಾತನಾಡಿದೆವು. ಎಐ ನಕಾರಾತ್ಮಕವಾಗದಂತೆ ನಿಯಂತ್ರಿಸಲು ಜಾಗತಿಕವಾಗಿ ನಿಯಂತ್ರಣ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಯೋಚಿಸುವ ಅವಶ್ಯಕತೆ ಬಗ್ಗೆ ನಾವು ಮಾತನಾಡಿದೆವು’ ಎಂದು ಮಾಹಿತಿ ನೀಡಿದರು.

ಭಾರತದಲ್ಲಿ ಸದ್ಯ ಇರುವ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಬದಲು ಹೊಸದಾಗಿ ಡಿಜಿಟಲ್ ಇಂಡಿಯನ್ ಮಸೂದೆ ರಚಿಸಲು ಯೋಜಿಸಲಾಗುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಯಾಂತ್ರಿಕ ಬುದ್ಧಿಮತ್ತೆ ಬಗ್ಗೆ ಕಾನೂನು ಹೇಗಿರಬೇಕು ಎಂಬ ವಿಚಾರದಲ್ಲಿ ಸ್ಯಾಮ್ ಆಲ್ಟ್​​ಮ್ಯಾನ್ ಅಭಿಪ್ರಾಯಕ್ಕೂ ಭಾರತದ ಆಡಳಿತದ ಚಿಂತನೆಗೂ ವ್ಯತ್ಯಾಸ ಇದೆ.ಸ್ಯಾಮ್ ಆಲ್ಟ್​ಮ್ಯಾನ್ ಅವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಚಾರದಲ್ಲಿ ಜಾಗತಿಕವಾಗಿ ಏಕರೂಪದ ನಿಯಂತ್ರಕ ವ್ಯವಸ್ಥೆ ಇರಬೇಕೆಂಬ ಅನಿಸಿಕೆ ಹೊಂದಿದ್ದಾರೆ. ಆದರೆ, ಭಾರತದ ನಿಲುವು ಇದಕ್ಕೆ ಭಿನ್ನವಾಗಿದೆ. ಕೆಲ ದಿನಗಳ ಹಿಂದೆ ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತಾ ಸರ್ಕಾರ ನಿಲುವೇನೆಂದು ಸುಳಿವು ನೀಡಿದ್ದರು.

‘ಅದೇನೆಂದರೆ ಸ್ಯಾಮ್ ಆಲ್ಟ್​ಮ್ಯಾನ್ ನಿಜಕ್ಕೂ ಸ್ಮಾರ್ಟ್ ಮನುಷ್ಯನೇ. ಯಂತ್ರ ಬುದ್ಧಿಮತ್ತೆ ಹೇಗೆ ರೆಗ್ಯುಲೇಟ್ ಆಗಬೇಕೆಂದು ಅವರದ್ದೇ ಅಭಿಪ್ರಾಯಗಳಿವೆ. ಆದರೆ, ಭಾರತದಲ್ಲೂ ಸ್ಮಾರ್ಟ್ ಜನರಿದ್ದಾರೆ. ಎಐ ಬಗ್ಗೆ ಕಾನೂನು ಹೇಗೆ ಇರಬೇಕು ಎಂಬ ಬಗ್ಗೆ ನಮ್ಮದೇ ದೃಷ್ಟಿಕೋನಗಳಿವೆ. ಸ್ಯಾಮ್ ಆಲ್ಟ್​ಮ್ಯಾನ್ ಆಶಯದಂತೆ ಎಐ ವಿಶ್ವಸಂಸ್ಥೆ ರಚನೆ ಆದರೆ ಒಳ್ಳೆಯದು. ಹಾಗಂತ ನಮ್ಮ ಡಿಜಿಟಲ್ ನಾಗರಿಕರಿಗೆ ಉಪಯುಕ್ತವಾಗುವಂಥದ್ದನ್ನು ಮಾಡಲು ಮತ್ತು ಇಂಟರ್ನೆಟ್ ಅನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು ನಮ್ಮನ್ನು ತಡೆಯಲಾಗುವುದಿಲ್ಲ’ ಎಂದು ರಾಜೀವ್ ಚಂದ್ರಶೇಖರ್ ಇತ್ತೀಚೆಗೆ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!