ಹೊಸದಿಗಂತ ಡಿಜಿಟಲ್ ಡೆಸ್ಕ್:
- ಹರೀಶ್ ಕೆ.ಆದೂರು
ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕೋತ್ಸವದ ಮೊದಲ ದಿನ ನಡೆದ ಭವ್ಯ ಸಾಂಸ್ಕೃತಿಕ ಮೆರವಣಿಗೆ ಅಕ್ಷರಶಃ ಭಾರತ ದೇಶದ ಭವ್ಯ ಸಾಂಸ್ಕೃತಿಕ ವೈಭವಕ್ಕೆ ಕೈಗನ್ನಡಿಯಾದಂತಾಯಿತು. ದೇಶದ ವಿವಿಧ ಸಾಂಸ್ಕೃತಿಕ ಪ್ರಕಾರಗಳ ಅನಾವರಣ ಒಂದೆಡೆಯಾಗುವಂತಾಯಿತು. ತನ್ಮೂಲಕ ನಿಜಾರ್ಥದಲ್ಲಿ ಆಳ್ವಾಸ್ ವಿರಾಸತ್ ಒಂದು ರಾಷ್ಟ್ರೀಯ ಸಾಂಸ್ಕೃತಿಕೋತ್ಸವ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸಿದಂತೆ ಭಾಸವಾಯಿತು.
ನೂರಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾತಂಡಗಳು ಈ ಭವ್ಯ ಮೆರವಣಿಗೆಯಲ್ಲಿ ಫಾಲ್ಗೊಂಡಿರುವುದು ಒಂದು ಅದ್ಭುತವೇ ಸೈ. 3000ಕ್ಕೂ ಅಧಿಕ ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಸೇರಿದ್ದ ಸಹಸ್ರ ಸಹಸ್ರ ಸಂಖ್ಯೆಯ ಕಲಾಪ್ರೇಮಿಗಳೆದರು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಒಂದನ್ನೊಂದು ಮೀರಿಸುವ ರೀತಿಯಲ್ಲಿ ಕಲಾ ತಂಡಗಳು ಅದ್ಭುತ ಪ್ರದರ್ಶನ ನಡೆಸಿದವು.
ಕಲಾ ತಂಡಗಳು
ಆರಂಭದಲ್ಲಿ ಶಂಖ ವಾದನದ ತಂಡ ತಮ್ಮ ಪ್ರದರ್ಶನ ತೋರಿದರು. ನಂತರ ದಾಸಯ್ಯ, ಕೊಂಬು, ರಣ ಕಹಳೆ, ಕಹಳೆ, ಕಾಲ ಬೈರವ, ಕೊರಗರ ಡೋಲು, ಸ್ಯಾಕ್ಸೋಫೋನ್, ಬ್ಲಾಕ್ ಎನಿಮಲ್, ನಂದೀಧ್ವಜ, ಸುಗ್ಗಿ ಕುಣಿತ, ಶ್ರೀ ರಾಮ, ಪರಶುರಾಮ, ಘಟೋತ್ಕಜ, ಊರಿನ ಚೆಂಡೆ ತಂಡ, ತಟ್ಟಿರಾಯ, ನಾದಸ್ವರ ತಂಡ, ಕೊಡೆಗಳು ಸಾಗಿ ಬಂದವು. ಇವುಗಳನ್ನು ಅನುಸರಿಸುತ್ತಾ ಪೂರ್ಣಕುಂಭ ಹಿಡಿದ ಸ್ತ್ರೀಯರು, ಲಂಗ ದಾವಣಿಗಳೊಂದಿಗೆ ಷೋಡಶಿಯರು, ಅಪ್ಸರೆಯರು ಮೆರವಣಿಗೆಯ ಮೆರುಗು ಹೆಚ್ಚಿಸಿದರು.
ನಂತರದಲ್ಲಿ ಅಬ್ಬರದ ಯಕ್ಷಗಾನ ವೇಷ, ಗೂಳಿ ಕಟ್ಟಪ್ಪ, ಗೊರವರ ಕುಣಿತ, ಕಿಂದರಿ ಜೋಗಿ ತಂಡ ಸಾಗಿದವು. ಸೋಮನ ಕುಣಿತ, ಆಂಜನೇಯ, ವಾನರ ಸೇನೆ ಮತ್ತೊಮ್ಮೆ ಇತಿಹಾಸವನ್ನು ಸ್ಮರಿಸುವಂತೆ ಮಾಡಿದವು. ಮಹಾಕಾಳೆಶ್ವರ, ಶಿವ, ಮರಗಾಲು, ತಮಟೆ ವಾದನ, ಆಂಜನೇಯ, ಮಹಿಳಾ ಪಟ ಕುಣಿತಗಳು ಸುಂದರವಾಗಿದ್ದವು. ತುಳುನಾಡ ಜಾನಪದ ಕಲೆ ಕಂಬುಳ, ಹುಲಿವೇಷ ಮೆರವಣಿಗೆಯಲ್ಲಿ ಅಬ್ಬರಿಸಿದವು. ಕೇರಳದ ತೆಯ್ಯಮ್, ಚಿಟ್ಟೆಮೇಳ, ಶಿವ ಅಘೋರಿಗಳು, ಕಿಂಗ್ ಕೋಂಗ್ ತಮ್ಮ ಪ್ರದರ್ಶನ ನೀಡಿದವು. ಶಿಲ್ಪಾ ಗೊಂಬೆ ಬಳಗ, ಆಳ್ವಾಸ್ ಗೊಂಬೆ ಬಳಗ, ಚೈನೀಸ್ ಡ್ರ್ಯಾಗನ್, ಚೈನಾ ಲಯನ್, ಬ್ಯಾಂಡ್ ಸೆಟ್, ಆಳ್ವಾಸ್ ಕಾರ್ಟೂನ್ಸ್, ಸ್ನೇಹ ಗೊಂಬೆ ಬಳಗ, ಚಿಲಿಪಿಲಿ ಬೊಂಬೆ, ವಂಶಿಕಾ ಗೊಂಬೆ ಬಳಗ, ಬಿದಿರೆ ಆರ್ಟ್ಸ್ ಮೂಡುಬಿದಿರೆ, ಶೆಟ್ಟಿ ಬೊಂಬೆಗಳು, ಶಾರದ ಆರ್ಟ್ಸ್ ಗೊಂಬೆ, ಶಾರದ ಆರ್ಟ್ಸ್ ಚೆಂಡೆ, ಟಾಲ್ ಮ್ಯಾನ್, ಹಿಮ ಕರಡಿ ಗೊಂಬೆ. ಚಿರತೆ ಗೊಂಬೆ, ಏರ್ ಬಲೂನ್ ಬೊಂಬೆ ಮೆರವಣಿಗೆಯಲ್ಲಿ ಆಕರ್ಷಕ ಪ್ರದರ್ಶನ ನೀಡುತ್ತಾ ಮನ ರಂಜಿಸಿದವು. ಕರಡಿ ಗೊಂಬೆ, ಗಜಹುಲಿ, ಕಾಟಿ, ಗಣಪತಿ, ನರಸಿಂಹ, ಹುಲಿ, ಬೋಳಾರ್ ಟೀಮ್, ವಾರ್‌ಕ್ರಾಫ್ಟ್, ಚಿಟ್ಟೆ, ಸಿಂಗಳೀಕ, ಗಣಪತಿ, ಜೋಡಿ ಸಿಂಹ, ಜೋಡಿ ಜಿಂಕೆಗಳು ದೇಶದ ವನ್ಯ ಮೃಗಗಳ ಬಗೆಗಿನ ಕಾಳಜಿಯನ್ನು ಪ್ರದರ್ಶಿಸುವಂತೆ ಭಾಸವಾಯಿತು. ಚಿತ್ರದುರ್ಗ ಬ್ಯಾಂಡ್, ಪೂಜಾಕುಣಿತ ಬೆಂಡರ ಕುಣಿತ, ಮಹಿಳೆಯರ ಕೋಲಾಟ, ಹಗಲುವೇಷ ಪ್ರದರ್ಶನಗಳು ಜಾನಪದ ಮೆರುಗನ್ನು ವಿರಾಸತ್‌ನಲ್ಲಿ ಪ್ರದರ್ಶಿಸುವಂತಾಯಿತು.
ಬೃಹತ್ ಕೋಳಿಗಳು, ನಾಸಿಕ್ ಬ್ಯಾಂಡ್, ಮೀನುಗಳು, ಕಾರ್ಟೂನ್ಸ್, ಪುರವಂತಿಕೆ, ವೀರಭದ್ರನ ಕುಣಿತ, ಜಗ್ಗಳಿಕೆ ಮೇಳ, ಪಟದ ಕುಣಿತ, ಕೊಂಚಾಡಿ ಚೆಂಡೆ, ಶ್ರೀಲಂಕಾ ಕಲಾವಿದರು, ಶ್ರೀಲಂಕಾದ ಮುಖವಾಡ, ವೀರಗಾಸೆ, ಕರಡಿ ಮಜಲು, ಕಂಸಾಳೆ, ಪುರುಷರ ನಗಾರಿ, ಮಹಿಳೆಯರ ನಗಾರಿ, ದಪ್ಪು, ತಿರುವಾದಿರ, ಡೊಳ್ಳು ಕುಣಿತ, ಪಂಚವಾದ್ಯ, ಏಂಜೆಲ್ಸ್,ಎಲ್ವ್ಸ್, ಸಂತಾಕ್ಲಾಸ್, ನಾಸಿಕ್ ಬ್ಯಾಂಡ್, ಶಿಂಗಾರಿ ಮೇಳ, ಅರ್ದ ನಾರೀಶ್ವರ, ಪೂಕಾವಡಿ, ಕೇರಳದ ಚಿಟ್ಟೆ, ಕಥಕ್ಕಳಿ ವೇಷ, ಕೇರಳದ ಅರೆನಾ ವೇಷ, ಕೇರಳದ ಕಮಲ ವೇಷ, ತಮಿಳುನಾಡಿನ ನೃತ್ಯ, ಶೃಂಗಾರಿ ಮೇಳ, ಕೇರಳದ ದೇವರ ವೇಷದ ಜೊತೆಗೆ ಕೇರಳದ ಡಿಜಿಟಲ್ ವೇಷವೂ ಪ್ರದರ್ಶನ ನೀಡಿತು!. ತೆಯ್ಯಮ್ ,ಬ್ಲೂ ಬ್ರಾಸ್ ಬ್ಯಾಂಡ್, ಕಾಮಿಡಿಯನ್ಸ್, ಗರುಡ, ಡೊಳ್ಳು ಕುಣಿತ ತಂಡಗಳು ಉತ್ತಮ ಪ್ರದರ್ಶನ ತೋರಿದವು. ಭವ್ಯ ಸಾಂಸ್ಕೃತಿಕ ಮೆರವಣಿಗೆಯಲ್ಲಿ ದೇಶದ ಸೇನಾ ಶಕ್ತಿಗಳನ್ನು ಪ್ರತಿನಿಧಿಸುವಂತೆ ಎನ್.ಸಿ.ಸಿ-ನೇವಲ್, ಎನ್.ಸಿ.ಸಿ-ಆರ್ಮಿ, ಎನ್.ಸಿ.ಸಿ-ಏರ್ ಫೋರ್ಸ್ ತಂಡಗಳು ತಮ್ಮ ಅದ್ಭುತ ಪ್ರದರ್ಶನ ತೋರಿದರು.
ಆಳ್ವಾಸ್ ಬ್ಯಾಂಡ್ ಸೆಟ್, ಸಟ್ಸ್ & ಗೈಡ್ಸ್,ರೋವರ್‍ಸ್, ರೇಂಜರ್ರ್ ತಂಡಗಳು ಮೆರವಣಿಗೆಯಲ್ಲಿ ಸಾಗಿದರು.
ಸುಮಾರು ಎರಡು ತಾಸುಗಳ ಕಾಲ ನಡೆದ ಅದ್ಭುತ ಭವ್ಯ ಸಾಂಸ್ಕೃತಿಕ ಮೆರವಣಿಗೆ ಅಳಿವಿನಂಚಿನಲ್ಲಿರುವ ಜಾನಪದ ಕೆಲೆಗಳ ರಕ್ಷಣೆ ಹಾಗೂ ಪೋಷಣೆಗೆ ಅವಕಾಶ ನೀಡುವಂತೆ ಭಾಸವಾಗಿದ್ದಂತೂ ಸುಳ್ಳಲ್ಲ.